Home Chikkaballapura Sidlaghatta ಮಾವಿನ ಹಣ್ಣಿನ ಬೆಲೆ ಕುಸಿದರೂ ನಷ್ಟ ಹೊಂದದ ರೈತ

ಮಾವಿನ ಹಣ್ಣಿನ ಬೆಲೆ ಕುಸಿದರೂ ನಷ್ಟ ಹೊಂದದ ರೈತ

109

Kambadahalli, sidlaghatta : ಈ ವರ್ಷ ಮಾವಿನ ಹಣ್ಣಿನ ಬೆಲೆಗಳು ತೀವ್ರವಾಗಿ ಕುಸಿದಿದ್ದು, ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆ “ಹಣ್ಣುಗಳ ರಾಜ ಮಾವು” ಕೊಯ್ಲಿಗೆ ಬಂದಿದೆ. ಒಂದೆಡೆ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದು, ಬೆಂಬಲ ಬೆಲೆ ಘೋಷಣೆ ಮಾಡಬೇಕೆಂಬ ಒತ್ತಾಯ ಬಲವಾಗುತ್ತಿದೆ. ಮತ್ತೊಂದೆಡೆ ಗುಣಮಟ್ಟದ ಬೆಳೆ ಬೆಳೆದು, ಸ್ವಯಂ ಮಾರಾಟ ಮಾಡುವ ಮೂಲಕ ಕೆಲ ರೈತರು ನಷ್ಟ ಹೊಂದದೆ ಲಾಭವನ್ನು ಗಳಿಸುವ ಮೂಲಕ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಕಂಬದಹಳ್ಳಿಯ ರೈತ ಸುರೇಂದ್ರಗೌಡ, ತಮ್ಮ ಎಂಟು ಎಕರೆ ಮಾವಿನ ತೋಟದಲ್ಲಿ ಒಂದು ಸಾವಿರ ಮಾವಿನ ಮರಗಳನ್ನು ಹೊಂದಿದ್ದಾರೆ. ಅವುಗಳಲ್ಲಿ 300 ಇಮಾಮ್ ಪಸಂದ್ ಮಾವಿನ ಮರಗಳನ್ನು ಬೆಳೆಸಿದ್ದಾರೆ. ಪ್ರತಿ ದಿನ 500 ಕೆಜಿ ಹಣ್ಣನ್ನು ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ಸ್ವಯಂ ಮಾರಾಟ ಮಾಡುತ್ತಿದ್ದಾರೆ.

ಇದುವರೆಗೂ ಎರಡು ಟನ್ ಮಾವಿನ ಹಣ್ಣನ್ನು ಒಂದು ಕೇಜಿಗೆ 200 ರೂಗಳಂತೆ ಮಾರಾಟ ಮಾಡಿದ್ದು, ಒಟ್ಟಾರೆ ಎಂಟು ಟನ್ ಇಮಾಮ್ ಪಸಂದ್ ಹಣ್ಣು ಸಿಗುತ್ತದೆ ಎಂದು ಅವರು ಹೇಳುತ್ತಾರೆ. ಒಂದೊಂದು ಹಣ್ಣೂ ಅರ್ಧ ಕೇ.ಜಿ ಯಿಂದ ಒಂದೂ ಕಾಲು ಕೇಜಿ ವರೆಗೂ ತೂಗುತ್ತದೆ.

ಇದಲ್ಲದೆ ಮಲ್ಲಿಕಾ ತಳಿಯ ಮಾವಿನ ಹಣ್ಣನ್ನು ಒಂದು ಕೇಜಿಗೆ 100 ರೂಗಳಿಗೆ ಮಾರುತ್ತಿದ್ದೇನೆ. ಬೈಗಾನಪಲ್ಲಿ ತಳಿಯ ಮಾವಿನಹಣ್ಣನ್ನು ಹಾಪ್ ಕಾಮ್ಸ್ ಗೆ ಕೊಡುತ್ತಿದ್ದೇನೆ. ಅವರು ಅದಕ್ಕೆ ಒಂದು ಕೇಜಿಗೆ 40 ರೂ ಕೊಡುತ್ತಿದ್ದಾರೆ. ಬಾದಾಮಿ ತಳಿಯ ಮಾವಿನಹಣ್ಣು ಎರಡೂವರೆ ಟನ್ ಸಿಕ್ಕಿತ್ತು. ಅದನ್ನು ಒಂದು ಕೇಜಿಗೆ 60 ರೂಗಳಂತೆ ಹಾಪ್ ಕಾಮ್ಸ್ ಗೆ ಕೊಟ್ಟಿದ್ದೇನೆ.

ಇದರೊಂದಿಗೆ ದಶೇರಿ ತಳಿಯ ಮಾವಿನಹಣ್ಣಿನ ಸುಮಾರು ಹತ್ತು ಮರಗಳಿವೆ. ಒಂದೊಂದು ಮರದಲ್ಲೂ ಒಂದು ನೂರು ಕೇ.ಜಿ ಯಷ್ಟು ಹಣ್ಣು ಸಿಗುತ್ತದೆ. ಅದನ್ನು ಒಂದು ಕೇ.ಜಿ. ಗೆ 150 ರೂಗಳಂತೆ ಮಾರಾಟ ಮಾಡಿದ್ದೇನೆ ಎಂದು ಅವರು ವಿವರಿಸಿದರು.

ಇಮಾಮ್ ಪಸಂದ್ ಮಾವಿನ ಹಣ್ಣನ್ನು ಮರದಿಂದ ಕಿತ್ತ ನಂತರ ಅದನ್ನು ಮೂರು ದಿನಗಳ ಕಾಲ ಒಣಹುಲ್ಲು ಮತ್ತು ಹತ್ತಿಯ ಟಾರ್ಪಾಲ್ ಹೊದಿಸಿ ಸಹಜವಾಗಿ ಹಣ್ಣು ಮಾಡುತ್ತೇನೆ. ರಾಸಾಯನಿಕವನ್ನು ಬಳಸದಿರುವುದರಿಂದ ಹಣ್ಣಿನ ರುಚಿ ಹೆಚ್ಚಿರುತ್ತದೆ. ಗ್ರಾಹಕರು ಇದನ್ನು ಬಹಳವಾಗಿ ಮೆಚ್ಚುತ್ತಾರೆ. ಒಮ್ಮೆ ತಿಂದವರು ದೂರವಣಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಪುನಃ ಬೇಡಿಕೆ ಇಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.

ಇಮಾಮ್ ಪಸಂದ್ ಮಾವಿನ ಹಣ್ಣು ಮರದಲ್ಲಿ ಸುಮಾರು 200 ಗ್ರಾಂ ತೂಗುವಾಗ, ಒಂದೊಂದು ಹಣ್ಣಿಗೂ ಬ್ಯಾಗ್ ಕಟ್ಟುತ್ತೇವೆ. ಇದರಿಂದ ಹೂಜಿ ನೊಣಗಳಿಂದ ಸಂರಕ್ಷಣೆ, ಆಲಿಕಲ್ಲು ಮಳೆಯಿಂದ ರಕ್ಷಣೆ ಸಿಗುತ್ತದೆ. ಪೂರ್ತಿ ಬೆಳೆದ ಹಣ್ಣಿನ ಬ್ಯಾಗ್ ತೆಗೆದಾಗ ಹಣ್ಣು ಯಾವುದೇ ಕಲೆಯಿಲ್ಲದೆ, ಹೊಳಪಿನಿಂದ ಕೂಡಿರುತ್ತದೆ.

ಇದರೊಂದಿಗೆ ತೋಟಗಾರಿಕೆ ಇಲಾಖೆ ನೀಡುವ ಹೂಜಿ ಮಾತ್ರೆಗಳನ್ನೂ ಬಳಕೆ ಮಾಡುತ್ತಿದ್ದೇನೆ. ಉತ್ತರಪ್ರದೇಶ, ಗುಜರಾತ್ ರಾಜ್ಯಗಳಲ್ಲದೆ, ವಿದೇಶಕ್ಕೆ ಸಾವಿರಾರು ಟನ್ ಮಾವಿನಹಣ್ಣು ರಫ್ತಾಗುತ್ತಿತ್ತು. ಆದರೆ ಈ ಬಾರಿ ನಾನಾ ಕಾರಣಗಳಿಂದ ಈ ರಫ್ತು ಆಗದೆ ಬೆಲೆ ಕುಸಿತ ಕಂಡಿದೆ. ನಾನು ಗುಣಮಟ್ಟ ಕಾಯ್ದುಕೊಂಡು ಬೆಂಗಳೂರಿನ ವಿವಿಧ ಅಪಾರ್ಟ್ ಮೆಂಟ್ ಗಳಲ್ಲಿ ನೇರ ಮಾರಾಟ ಮಾಡುತ್ತಿರುವುದರಿಂದ ನನಗೆ ಉತ್ತಮ ಆದಾಯ ಬರುತ್ತಿದೆ.

ತೋಟಗಾರಿಕೆ ಇಲಾಖೆಯವರು ಹಾಪ್ ಕಾಮ್ಸ್ ಮೂಲಕ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಇಮಾಮ್ ಪಸಂದ್ ಮಾವಿನ ಹಣ್ಣನ್ನು ಒಂದು ಕೇ.ಜಿ ಗೆ 250 ರೂಗಳಿಗೆ ಮಾರುತ್ತಿದ್ದಾರೆ. ಆದರೆ ನಾನು ಗ್ರಾಹಕರಿಗೆ ನೇರವಾಗಿ 200 ರೂಗಳಿಗೆ ಮಾರುತ್ತಿದ್ದೇನೆ. ವೈಜ್ಞಾನಿಕವಾಗಿ ನಿರ್ವಣೆ ಹಾಗೂ ವ್ಯವಸ್ಥಿತವಾಗಿ ಮಾರಾಟ ಮಾಡಿದಾಗ ಹೆಚ್ಚಿನ ಆದಾಯ ಸಿಗುತ್ತದೆ ಎನ್ನುತ್ತಾರೆ ರೈತ ಸುರೇಂದ್ರಗೌಡ.

ಮಾಹಿತಿ: ರೈತ ಸುರೇಂದ್ರಗೌಡ (M) +91 97412 34876

-ಡಿ.ಜಿ.ಮಲ್ಲಿಕಾರ್ಜುನ

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page