
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಶ್ರೀ ಗಣಪತಿ, ಶ್ರೀ ಸುಬ್ರಮಣ್ಯಸ್ವಾಮಿ, ಶ್ರಿ ಕಾಲಭೈರವೇಶ್ವರ, ದಕ್ಷಿಣಾಮೂರ್ತಿ ಹಾಗೂ ದಂಪತಿ ಸಮೇತ ನವಗ್ರಹಗಳು, ನಾಗರಕಲ್ಲುಗಳು ಹಾಗೂ ನೂತನ ನಂದಿ ವಿಗ್ರಹಗಳು ಮತ್ತು ಧ್ವಜಸ್ತಂಭ ಪ್ರತಿಷ್ಠಪನೆಯ 48 ದಿನಗಳ ಮಂಡಲಪೂಜೆ ಕಾರ್ಯಕ್ರಮ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮೇಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ಬಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು.
ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವದ 48 ದಿನಗಳ ಮಂಡಲ ಪೂಜೆ ಅಂಗವಾಗಿ ಸೋಮವಾರದಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿತು. ಮಂಗಳವಾರ ಪ್ರಾತಃಕಾಲ ಮಹಾಸಂಕಲ್ಪ, ಗಣಪತಿ ದೇವರ ಪ್ರಾರ್ಥನೆ, ಪ್ರದಾನ ದೇವತೆಗಳಿಗೆ ಹಾಗು ಪರಿವಾರ ದೇವತೆಗಳಿಗೆ ಮಹಾರುದ್ರಾಭಿಷೇಕ, ಸಂಕ್ಷಿಪ್ತ ಕಳಸ ಪೂಜೆ ನಂತರ ಗಣಪತಿ ಹೋಮ, ಮಹಾರುದ್ರ ಹೋಮ, ನವಗ್ರಹ ಹೋಮ, ಶ್ರಿಸೂಕ್ತ ಹೋಮ, ಶಾಮತಿ ಹೋಮ, ಪ್ರಾಯಶ್ಚಿತ್ತ ಹೋಮ, ಜಯಾದಿ ಹೋಮ ನಂತರ ಪೂರ್ಣಾಹುತಿ ನಂತರ ಜಗದ್ಗುರು ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಮಂಡಲಾಭಿಷೇಕ ನೆರವೇರಿತು.
ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆ ಸೇವೆ ಆಯೋಜಿಸಲಾಗಿತ್ತು.
ಗ್ರಾ.ಪಂ ಸದಸ್ಯ ಆರ್.ಎ.ಉಮೇಶ್, ಮುಖಂಡರಾದ ರಾಮಕೃಷ್ಣಪ್ಪ, ಮಂಜುನಾಥ್, ಅಶ್ವತ್ಥಪ್ಪ ರಮೇಶ್, ನಾಗರಾಜ್, ಬಿ.ಕೆ.ಶ್ರೀನಿವಾಸ್, ಎಚ್.ಟಿ.ಸುದರ್ಶನ್, ಎಸ್.ಆರ್.ಶ್ರೀನಿವಾಸಮೂರ್ತಿ, ಪ್ರಭಾಕರ್ ಸೇರಿದಂತೆ ಮೇಲೂರು ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದ್ದರು.







