
Sadali : ಯುವಕರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದು ಅಗತ್ಯವಾಗಿದ್ದು, ದುಶ್ಚಟಗಳಿಂದ ದೂರವಿರಲು ಮತ್ತು ಶಾರೀರಿಕ-ಮಾನಸಿಕ ಬೆಳವಣಿಗೆಗಾಗಿ ಕ್ರೀಡೆಯು ಪ್ರಮುಖ ಪಾತ್ರವಹಿಸುತ್ತದೆ ಎಂದು ಆರ್.ಸಿ.ಜಿ. ಫೌಂಡೇಶನ್ ಸಂಸ್ಥಾಪಕ ಹಾಗೂ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.
ತಾಲ್ಲೂಕಿನ ಸಾದಲಿಯ ಹೊರವಲಯದಲ್ಲಿರುವ ಕ್ರೀಡಾ ಮೈದಾನದಲ್ಲಿ ಆರ್.ಸಿ.ಜಿ. ಫೌಂಡೇಶನ್ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.
“ಕ್ರೀಡೆಯಲ್ಲಿ ಸೋಲು–ಗೆಲುವು ಸಹಜ. ಆದರೆ ಸ್ಪರ್ಧಾತ್ಮಕ ಮನೋಭಾವದಿಂದ, ಶಿಸ್ತುಪಾಲನೆ ಜೊತೆ ಕ್ರೀಡಾಪಟುಗಳು ಭಾಗವಹಿಸಬೇಕು. ಈ ಹೋಬಳಿ ಮಟ್ಟದ ದೊಡ್ಡ ಕ್ರಿಕೆಟ್ ಟೂರ್ನಮೆಂಟ್ ಮೂಲಕ ಯುವಕರಲ್ಲಿ ಕ್ರೀಡಾ ಚೈತನ್ಯವನ್ನು ಉಂಟುಮಾಡುವ ಪ್ರಯತ್ನ ಮಾಡಲಾಗುತ್ತಿದೆ,” ಎಂದರು.
ಸಮಾಜಿಕ ಮುಖ್ಯವಾಹಿನಿಗೆ ಯುವಕರನ್ನು ತರುವ ಉದ್ದೇಶದಿಂದ, ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ಅವರಲ್ಲಿ ಅಡಗಿರುವ ಪ್ರತಿಭೆಗೆ ಉತ್ತೇಜನ ನೀಡಲಾಗುತ್ತಿದೆ. ಈ ಮೂಲಕ ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುವ ಸಾಧ್ಯತೆಗಳಿವೆ ಎಂದು ಹೇಳಿದರು.
“ಯುವಶಕ್ತಿ ಕೇವಲ ಸ್ಪರ್ಧೆಗೆ ಸೀಮಿತವಲ್ಲ. ಇದು ಪ್ರೇರಣೆಯ ಹಾದಿಯಾಗಿದೆ. ನೇತೃತ್ವದ ಗುಣವನ್ನು ಬೆಳಸುವ ಉತ್ತಮ ವೇದಿಕೆ ಇದು” ಎಂದು ಅವರು ಹೋಚಿಸಿದರು.
ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದ್ದು, ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದ ತಂಡಗಳು ತಾಲ್ಲೂಕು ಮಟ್ಟದ ಅಂತಿಮ ಪಂದ್ಯಗಳಲ್ಲಿ ಆಡಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಸಮಸ್ತ ಕ್ರೀಡಾಪಟುಗಳಿಗೆ ಟೀ-ಶರ್ಟ್ ವಿತರಣೆ ಮಾಡಲಾಯಿತು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ನವೀನ್ ಕುಮಾರ್ (ನಾನಿ), ನಾಗರಾಜು, ತಿಪ್ಪಣ್ಣ, ಎಸ್.ಜೆ. ಶ್ರೀನಿವಾಸ್, ಪ್ರಸನ್ನ, ಭರತ್, ನೀಲವರತಹಳ್ಳಿ ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.