Shivamogga: ಶರಾವತಿ ಹಿನ್ನೀರಿನ ಮೇಲೆ ನಿರ್ಮಿಸಲಾದ ದೇಶದ ಎರಡನೇ ಅತಿ ಉದ್ದದ ತೂಗುಸೇತುವೆಯನ್ನು (Sigandur Bridge) ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು ಉದ್ಘಾಟಿಸಿದರು.
ಉದ್ಘಾಟನೆಯ ಮೊದಲು, ಗಡ್ಕರಿ ಅವರು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಶರಾವತಿ ನದಿಗೆ ಬಾಗಿನ ಅರ್ಪಿಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕರು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ವೇದಿಕೆ ಕಾರ್ಯಕ್ರಮ ಸಾಗರದಲ್ಲಿ ನಡೆಯಿತು.
ಈ ಸೇತುವೆ ಶರಾವತಿ ದ್ವೀಪದ ಜನರ ಹಳೆ ಕನಸು. 2010ರಲ್ಲಿ ಪ್ರಾರಂಭವಾದ ಕಾಮಗಾರಿ, 2025ರಲ್ಲಿ ಪೂರ್ಣಗೊಂಡಿದೆ. ಇದಕ್ಕೆ ಸುಮಾರು ₹423 ಕೋಟಿ ವೆಚ್ಚವಾಗಿದೆ. ಸಾಗರದಿಂದ ಹೊಸನಗರ ತಾಲೂಕಿನ ಮರಕುಟುಕದವರೆಗೆ ರಸ್ತೆ ವಿಸ್ತರಣೆ ಮಾಡಿ ಈ ಸೇತುವೆ ನಿರ್ಮಿಸಲಾಗಿದೆ.
ಈ ಬಗ್ಗೆ ಸಂಸದ ರಾಘವೇಂದ್ರ ಹೇಳುವಾಗ, “ಹಿಂದೆ ಸೇತುವೆ ಇಲ್ಲದ ಕಾರಣದಿಂದಾಗಿ ತೆಪ್ಪ ಮುಳುಗಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಜನರು ಅದಕ್ಕಾಗಿ ಹೋರಾಟ ಮಾಡಿದ್ದಾರೆ. ಈಗ ಅದು ಫಲ ನೀಡಿದೆ. ನಾನು ಇದರಲ್ಲಿ ಭಾಗಿಯಾದುದು ನನ್ನ ಪಾಲಿಗೆ ಗೌರವ” ಎಂದು ತಿಳಿಸಿದ್ದಾರೆ.