
Karwar: ಸಾಮಾನ್ಯವಾಗಿ ರಾಜಕೀಯ ನಾಯಕರ ಅಭಿಮಾನಿಗಳು ದೊಡ್ಡ ಬ್ಯಾನರ್ ಹಾಕುವುದು, ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡುವುದು ಅಥವಾ ಹಾಲಿನ ಅಭಿಷೇಕ ಮಾಡುವುದು ಸಹಜ. ಆದರೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (Ramakrishna Hegde) ಅವರ ಅನುಯಾಯಿ ಪ್ರಮೋದ ಹೆಗಡೆ ಅವರು ಈ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಹೆಗಡೆ ಅವರ ನೆನಪಿಗಾಗಿ, ಯಲ್ಲಾಪುರದ ತಮ್ಮ ಮನೆಯಲ್ಲಿ “ಮೌನ” ಎಂಬ ಗ್ರಂಥಾಲಯ (Library) ಆರಂಭಿಸಿದ್ದಾರೆ.
ರಾಮಕೃಷ್ಣ ಹೆಗಡೆ ಅವರ ಮನೆಯಲ್ಲಿ ಒಮ್ಮೆ ಗ್ರಂಥಾಲಯವಿತ್ತು. ಅವರು ವಾರದಲ್ಲಿ ಆರು ದಿನ ಕಾರ್ಯನಿರತರಾಗಿದ್ದು, ಭಾನುವಾರ ಮಾತ್ರ ಓದುವಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಓದಿನ ಪ್ರೇರಣೆಯನ್ನು ಸ್ನೇಹಿತರಿಗೂ ಹಂಚಿಕೊಳ್ಳುತ್ತಿದ್ದ ಅವರು, ಮೌನದಿಂದ ಪ್ರಬುದ್ಧತೆ ಹೇಗೆ ಬರುತ್ತದೆ ಎಂಬುದರ ಮಹತ್ವವನ್ನು ನಿರಂತರವಾಗಿ ತಿಳಿಸುತ್ತಿದ್ದರು ಎಂದು ಪ್ರಮೋದ ಹೆಗಡೆ ನೆನಪಿಸಿಕೊಂಡರು.
ಈ ಗ್ರಂಥಾಲಯದ ವಿಶೇಷತೆ ಏನೆಂದರೆ, ಇಲ್ಲಿ 10,000ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದ್ದು, ಕೇವಲ ತಮ್ಮ ಓದಿಗೆ ಮಾತ್ರವಲ್ಲ, ಸಾರ್ವಜನಿಕರಿಗೆ ಉಚಿತವಾಗಿ ಓದುವ ಅವಕಾಶ ನೀಡಲಾಗಿದೆ. ಓದಿನ ಆಸಕ್ತಿ ಬೆಳೆಸಲು ಇದು ಅತ್ಯುತ್ತಮ ವೇದಿಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
“ದೇಶ ಸುತ್ತೋಣ, ಕೋಶ ಓದೋಣ” ಎಂಬ ಗಾದೆಯನ್ನು ಈ ಗ್ರಂಥಾಲಯ ಮೂಡಿಸುತ್ತಿದ್ದು, ಇಲ್ಲಿ ಬಂದ ಅನೇಕರು ಓದಿನ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹೆಚ್ಚಿನವರು ಇಲ್ಲಿನ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದುತ್ತಿದ್ದಾರೆ.
ಈ ರೀತಿಯಾಗಿ, ಹೆಗಡೆ ಅವರ ಅಭಿಮಾನಿಯನ್ನು ತೋರಿಸಲು ವ್ಯರ್ಥದ ಆಚರಣೆಗಳಿಗಿಂತ, ಓದುವ ಹವ್ಯಾಸವನ್ನು ಪ್ರೇರೇಪಿಸುವ ಈ ಕ್ರಮ ನಿಜಕ್ಕೂ ಪ್ರೇರಣಾದಾಯಕವಾಗಿದೆ.