Doddaballapur : 2020-21ನೇ ಸಾಲಿನ ರಾಜ್ಯಮಟ್ಟದ ಪ್ರಗತಿ ಪರ ಮಹಿಳಾ ರೇಷ್ಮೆ ಬೆಳೆಗಾರರು ವಿಭಾಗದಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಸೀಗೆಹಳ್ಳಿಯ ರತ್ನಮ್ಮ ರಾಮಯ್ಯ ಅವರಿಗೆ ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ದೊರೆತಿದೆ. 2020-21ನೇ ಸಾಲಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ವಾರ್ಷಿಕವಾಗಿ ಉತ್ಪಾದನಾ ವೆಚ್ಚವನ್ನು ಹೊರತುಪಡಿಸಿ ₹ 3.83 ಲಕ್ಷ ಲಾಭ ಪಡೆಯುತ್ತಿದ್ದ ರತ್ನಮ್ಮ ರಾಜ್ಯಮಟ್ಟದ ಸಾಧನೆ ಮಾಡಿ ತಾಲ್ಲೂಕಿಗೆ ಮಾದರಿಯಾಗಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ರತ್ನಮ್ಮ “ನಾವು 25 ವರ್ಷದಿಂದ ರೇಷ್ಮೆ ಕೃಷಿ ಮಾಡಿಕೊಂಡು ಬಂದಿದ್ದು 10 ವರ್ಷಗಳ ಹಿಂದೆ ಪ್ರತಿ ಕೆ.ಜಿಗೆ ₹150 ರಿಂದ ₹300 ಬೆಲೆ ಇತ್ತು. 10 ವರ್ಷಗಳ ನಂತರ ರೇಷ್ಮೆ ಇಲಾಖೆ ಸಹಯೋಗದಿಂದ ರೇಷ್ಮೆ ಕೃಷಿ ಲಾಭದಾಯಕವಾಗಿದೆ. ರೇಷ್ಮೆ ಇಲಾಖೆ ಸಹಕಾರ ಸಿಕ್ಕ ನಂತರ ಹಿಪ್ಪುನೇರಳೆ ಬೆಳೆಯಲು ನರೇಗಾದಿಂದ ಸಹಾಯಧನ, ರೇಷ್ಮೆಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯ ದೊರೆತಿದೆ. ಇದರಿಂದ ವರ್ಷಕ್ಕೆ ಸುಮಾರು 11 ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ” ಎಂದು ತಿಳಿಸಿದರು.
ರತ್ನಮ್ಮರವರ ಜೊತೆಗೆ ಮರಳೇನಹಳ್ಳಿಯ ತಿಮ್ಮರಾಜು ಗಂಗಪ್ಪ ಅವರು ಪುರುಷ ವಿಭಾಗದಲ್ಲಿ ಜಿಲ್ಲಾಮಟ್ಟದ ದ್ವಿತೀಯ ಸ್ಥಾನ ಪಡೆದಿದ್ದಾರೆ.