Bengaluru: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಸ್.ಎಂ. ಕೃಷ್ಣ (SM Krishna) ಅವರು ಇಂದು ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿಸೆಂಬರ್ 10 ರಿಂದ 12ರ ವರೆಗೆ 3 ದಿನಗಳ ಶೋಕಾಚರಣೆ ಘೋಷಿಸಿದೆ. ನಾಳೆ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಪ್ರಕಟಿಸಲಾಗಿದೆ.
ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ಅವರ ತವರು ಮದ್ದೂರಿನ ಸೋಮನಹಳ್ಳಿಯ ಕಾಫಿಡೇ ಆವರಣದಲ್ಲಿ, ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಎಸ್ಎಂ ಕೃಷ್ಣ ಅವರು ಅಸಾಧಾರಣ ನಾಯಕರಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ. BJP ಹಿರಿಯ ನಾಯಕ ಎಸ್ಎಂ ಕೃಷ್ಣ ನಿಧನರಾಗಿರುವ ಕಾರಣ, ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಸಮಾಜದ ಎಲ್ಲಾ ವರ್ಗಗಳಿಂದ ಮೆಚ್ಚುಗೆಗೆ ಪಾತ್ರರಾದ ಕೃಷ್ಣ ಅವರು, ಇತರರ ಜೀವನ ಸುಧಾರಿಸಲು ನಿರಂತರ ಪ್ರಯತ್ನಿಸುತ್ತಿದ್ದರು. ತಮ್ಮ ಮುಖ್ಯಮಂತ್ರಿಯಾಗಿ ಇರುವ ಕಾಲದಲ್ಲಿ, ಅವರು ಕರ್ನಾಟಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಅವರು ಉತ್ತಮ ಓದುಗ ಮತ್ತು ಚಿಂತಕರೂ ಆಗಿದ್ದರು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ: “ರಾಜ್ಯ ಒಂದು ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆ ವೈಯಕ್ತಿಕ ನೋವುಂಟು ಮಾಡಿದೆ.” ಎಂದು ಸಂತಾಪ ಸೂಚಿಸಿದ್ದಾರೆ.
ಬಸವರಾಜ ಬೊಮ್ಮಾಯಿ: “ಬೆಂಗಳೂರು ನಗರಕ್ಕೆ ಐಟಿ-ಬಿಟಿ ವಲಯವನ್ನು ತಂದು, ಜಾಗತಿಕ ಗುರುತನ್ನು ತಂದಿದ್ದ ಎಸ್.ಎಂ. ಕೃಷ್ಣ ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ.” ಎಂದು ಸಂತಾಪ ಸೂಚಿಸಿದ್ದಾರೆ.
ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಎಸ್ಎಂ ಕೃಷ್ಣ ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.