Bengaluru: ಹೂವು, ಹಣ್ಣು, ತರಕಾರಿ, ಹಾಲು, ಬೇಕರಿ, ಕಾಂಡಿಮೆಂಟ್ಸ್ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು GST ನೋಟಿಸ್ (GST Notice) ವಿರುದ್ಧ ಇಂದು ಮತ್ತು ನಾಳೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಫೋನ್ ಪೇ, ಗೂಗಲ್ ಪೇ, ಪೇಟಿಎಂ (PhonePe, Google Pay, Paytm) ಮುಂತಾದ ಯುಪಿಐ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ 40 ಲಕ್ಷ ರೂ. ವಹಿವಾಟು ಮಾಡಿದ ಸರಕು ವ್ಯಾಪಾರಿಗಳು ಮತ್ತು 20 ಲಕ್ಷ ವಹಿವಾಟು ಮಾಡಿದ ಸೇವಾ ವ್ಯವಹಾರಿಗಳಿಗೆ GST ನೋಟಿಸ್ ಬಂದಿದ್ದು, 14 ಸಾವಿರ ಸಣ್ಣ ವ್ಯವಹಾರಿಗಳಿಗೆ ಸಹ ನೋಟಿಸ್ ನೀಡಲಾಗಿದೆ.
ಇದರ ವಿರುದ್ಧವಾಗಿ ಸಣ್ಣ ವ್ಯಾಪಾರಿಗಳು ಇಂದು ಮತ್ತು ನಾಳೆ ಹಾಲು, ಸಿಗರೇಟ್ ಮಾರಾಟ ಸ್ಥಗಿತಗೊಳಿಸಿ, ಕಪ್ಪು ಪಟ್ಟಿಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಜುಲೈ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಯುತ್ತಿದೆ.
ವಾಣಿಜ್ಯ ತೆರಿಗೆ ಇಲಾಖೆ ಸಣ್ಣ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ ರೀತಿಯು ಅಕ್ಷಮ್ಯ ಎಂದಿರುವ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು, ಇದು ರಾಜ್ಯ ಸರ್ಕಾರದ ಕ್ರಮ ಎಂದು ಆರೋಪಿಸಿದ್ದಾರೆ.
ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ” ಎಂದು ಹೇಳಿದ್ದರೆ, ಅದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ” GST ನೋಟಿಸ್ ಕೇಂದ್ರದಿಂದಲ್ಲ, ಇದು ರಾಜ್ಯ ಸರ್ಕಾರದ ನಿರ್ಧಾರ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಕಾವೇರಿ ನಿವಾಸದಲ್ಲಿ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದು, GST ನೋಟಿಸ್ ಕುರಿತು ಚರ್ಚೆ ನಡೆಯಲಿದೆ. ಈ ಸಭೆಯು ಸಣ್ಣ ವ್ಯಾಪಾರಿಗಳಿಗೆ ಪರಿಹಾರ ನೀಡಬಹುದೆಂಬ ನಿರೀಕ್ಷೆ ಮೂಡಿದೆ.