Kathmandu: ನೇಪಾಳ (Nepal) ಸರ್ಕಾರ 26 ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಿದ ನಂತರ ದೇಶಾದ್ಯಂತ ಭಾರೀ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನೆಯಲ್ಲಿ ಹಿಂಸಾಚಾರ ಸ್ಫೋಟಗೊಂಡಿದ್ದು, ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸೇನೆ ನಿಯೋಜಿಸಲಾಗಿದೆ.
ಸರ್ಕಾರ ಸುಪ್ರೀಂಕೋರ್ಟ್ ಆದೇಶದಂತೆ ನೋಂದಾಯಿಸದ ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಿತು. ಫೇಸ್ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ 26 ತಾಣಗಳು ಬಂದ್ ಆಗಿವೆ. ನಕಲಿ ಸುದ್ದಿ ಹಾಗೂ ಸೈಬರ್ ಅಪರಾಧ ತಡೆಯುವ ಉದ್ದೇಶ ಸರ್ಕಾರದದ್ದು ಎಂದು ಹೇಳಲಾಗಿದೆ.
‘ಜೆನ್ ಝಡ್’ ಬ್ಯಾನರ್ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಕಠ್ಮಂಡುವಿನ ಸಂಸತ್ ಕಟ್ಟಡದ ಮುಂದೆ ಸೇರಿ ಸರ್ಕಾರ ವಿರೋಧಿ ಘೋಷಣೆಗಳನ್ನು ಕೂಗಿದರು. ನಿಷೇಧ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಮುರಿದು ಹಾಕಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು, ರಬ್ಬರ್ ಗುಂಡು ಹಾಗೂ ನಿಜವಾದ ಗುಂಡಿನ ದಾಳಿಗೂ ಮೊರೆ ಹೋದರು. ಇದರ ಪರಿಣಾಮವಾಗಿ ಅನೇಕರು ಮೃತಪಟ್ಟಿದ್ದಾರೆ. ರಾಜಧಾನಿಯ ಹಲವು ಭಾಗಗಳಲ್ಲಿ ಕರ್ಫ್ಯೂ ಜಾರಿಯಾಗಿದೆ.
ಸಾಮಾಜಿಕ ಜಾಲತಾಣ ಬಂದ್ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದ್ದಂತೆಯೇ, ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಗೃಹ ಸಚಿವ ರಮೇಶ್ ಲೇಖಕ್ ಹಿಂಸಾಚಾರದ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದರು.
ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಶಾಂತಿಯುತ ಪ್ರತಿಭಟನೆಗೆ ಅನಗತ್ಯ ಅಂಶಗಳು ಸೇರಿಕೊಂಡು ಪರಿಸ್ಥಿತಿ ಹದಗೆಟ್ಟಿತ್ತೇ ಹೊರತು ಸರ್ಕಾರಕ್ಕೆ ನಿಷೇಧಿಸುವ ಉದ್ದೇಶ ಇರಲಿಲ್ಲ, ಕೇವಲ ನಿಯಂತ್ರಣ ಗುರಿಯೇ ಇತ್ತು ಎಂದು ಸ್ಪಷ್ಟಪಡಿಸಿದರು. ಈ ಕುರಿತು 15 ದಿನಗಳಲ್ಲಿ ತನಿಖಾ ವರದಿ ನೀಡಲು ಸಮಿತಿ ರಚಿಸಲಾಗಿದೆ.
ನೇಪಾಳದ ಅಶಾಂತಿ ಪರಿಣಾಮವಾಗಿ ಉತ್ತರ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ಹೆಚ್ಚುವರಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.







