Bengaluru: ಕರ್ನಾಟಕದಲ್ಲಿ ಬಿಜೆಪಿ (Karnataka BJP) ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗರಿಗೆದರುತ್ತಿದೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ರಾಧಾ ಮೋಹನ್ ದಾಸ್ ಸರಣಿ ಸಭೆಗಳನ್ನು ನಡೆಸಿದ್ದಾರೆ. ನಿನ್ನೆ (ಜನವರಿ 21) ಕೋರ್ ಕಮಿಟಿ ಸಭೆಯ ವೇಳೆ ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಅವರು ತಮ್ಮ ಅಸಮಾಧಾನ ಹೊರಹಾಕಿ, ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆ ನಡೆದ ವೇಳೆ, ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ಶ್ರೀರಾಮುಲು ವಿರುದ್ಧ ತೀವ್ರ ಟೀಕೆ ಮಾಡಿದ್ರಂತೆ. ಈ ಹೇಳಿಕೆಗಳಿಂದ ಅಸಮಾಧಾನಗೊಂಡ ಶ್ರೀರಾಮುಲು, ತಮ್ಮ ಕೆಲಸದ ಬಗ್ಗೆ ಪ್ರಶ್ನೆ ಕೇಳಿ, ಇನ್ನೂ ವರದಿ ಪೂರ್ಣಗೊಂಡಿಲ್ಲ ಎಂದಿದ್ದಾರೆ.
ಶ್ರೀರಾಮುಲು, “ನಾನು ಮಾಡಿದ್ದ ಕೆಲಸಕ್ಕೆ ಬೆಲೆ ಕೊಡಲಿಲ್ಲ. ಹೈಕಮಾಂಡ್‌ಗೂ ದೂರು ನೀಡುತ್ತೇನೆ. ಬೇಕಾದರೆ ಪಕ್ಷವನ್ನೇ ತೊರೆಯುತ್ತೇನೆ,” ಎಂದು ಹೇಳಿಕೊಂಡಿದ್ದಾರೆ.
ವಿಜಯೇಂದ್ರ ಮತ್ತು ರಾಧಾ ಮೋಹನ್ ದಾಸ್ ವಿರುದ್ಧ ಶ್ರೀರಾಮುಲು ಕಿಡಿಕಾರಿದ್ದು, “ನಿಮಗೆ ಬೇಕಿಲ್ಲದಿದ್ದರೆ ಹೇಳಿ, ಪಕ್ಷ ಬಿಡಲು ಸಿದ್ಧ,” ಎಂದಿದ್ದಾರೆ.
ಶ್ರೀರಾಮುಲು ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ದೂರವಾಣಿ ಮೂಲಕ ದೂರು ನೀಡಿದ್ದು, ತಮ್ಮ ಮೇಲೆ ಕೇಳಿಸಲಾಗುವ ಆರೋಪಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಲ್ ಸಂತೋಷ್, ಶ್ರೀರಾಮುಲು ಅವರನ್ನು ಸಮಾಧಾನಪಡಿಸಿ, “ನಿಮ್ಮ ಸಾಮರ್ಥ್ಯದ ಮೇಲೆ ಪಕ್ಷದ ನಂಬಿಕೆ ಇದೆ. ರಾಜಕೀಯದಲ್ಲಿ ಇಂತಹ ಘಟನೆಗಳು ಸಾಮಾನ್ಯ. ಸಂಘಟನೆಯ ಮೇಲೆ ಗಮನಹರಿಸಿ,” ಎಂದು ಭರವಸೆ ನೀಡಿದ್ದಾರೆ.
ಬಿಜೆಪಿಯ ಒಳಗಿರುವ ಗೊಂದಲಗಳು ಮತ್ತು ಶ್ರೀರಾಮುಲು ಅವರ ಅಸಮಾಧಾನ, ಪಕ್ಷದೊಳಗಿನ ಬಣ ಬಡಿದಾಟವನ್ನು ತೆರೆದಿಟ್ಟಿದೆ. ರಾಜ್ಯಾಧ್ಯಕ್ಷರ ಆಯ್ಕೆ ನಡುವೆ ಈ ವಿಚಾರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.