ನವದೆಹಲಿ: Prayagrajನಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ (Maha Kumbh Mela) ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತದ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು (ಫೆಬ್ರವರಿ 3) ನಿರಾಕರಿಸಿದೆ. ಅರ್ಜಿದಾರರು ಅಲಹಾಬಾದ್ ಹೈಕೋರ್ಟ್‌ಗೆ ಹೋಗುವಂತೆ ಪೀಠ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠ ಈ ಪಿಐಎಲ್ ವಿಚಾರಣೆಯನ್ನು ನಿರಾಕರಿಸಿ, “ಇದು ದುರದೃಷ್ಟಕರ ಘಟನೆ, ಆದರೆ ನೀವು ಹೈಕೋರ್ಟ್ ಮೆಟ್ಟಿಲೇರಬಹುದು” ಎಂದು ತಿಳಿಸಿದೆ.
ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ ವಕೀಲರು, ಈ ಪ್ರಕರಣದ ಬಗ್ಗೆ ನ್ಯಾಯಾಂಗ ಆಯೋಗವನ್ನು ಸ್ಥಾಪಿಸಲಾಗಿದೆ ಹಾಗೂ ಹೈಕೋರ್ಟ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ಪಿಐಎಲ್‌ನಲ್ಲಿ ಮಾಡಿದ ಬೇಡಿಕೆಗಳು
- ಕಾಲ್ತುಳಿತದ ಬಗ್ಗೆ ಸಮಗ್ರ ವರದಿ ನೀಡಬೇಕು.
- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
- ವೈದ್ಯ ಮತ್ತು ಸಹಾಯ ಕೇಂದ್ರಗಳು ಪ್ರತಿಯೊಂದು ರಾಜ್ಯದಿಂದ ಸ್ಥಾಪನೆಯಾಗಬೇಕು.
- ವಿಐಪಿ ಚಲನೆಯನ್ನು ನಿಯಂತ್ರಿಸಿ, ಸಾರ್ವಜನಿಕರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಬೇಕು.
ಜನವರಿ 29ರಂದು, ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಲಕ್ಷಾಂತರ ಯಾತ್ರಿಕರು ಪವಿತ್ರ ಸ್ನಾನಕ್ಕಾಗಿ ತ್ರಿವೇಣಿ ಸಂಗಮ ಪ್ರದೇಶಕ್ಕೆ ಧಾವಿಸಿದಾಗ ಕಾಲ್ತುಳಿತ ಉಂಟಾಯಿತು. ಈ ಘಟನೆಯಲ್ಲಿ 30 ಜನರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಗಾಯಗೊಂಡರು. ಮಹಾ ಕುಂಭ ಮೇಳ ಜನವರಿ 13ರಿಂದ ಪ್ರಾರಂಭವಾಗಿ ಫೆಬ್ರವರಿ 26ರವರೆಗೆ ನಡೆಯಲಿದೆ.