Bengaluru: ನವೆಂಬರ್ 24 ರಂದು ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದ (State level Journalists’ Games) ಅಂಗವಾಗಿ, ಗೃಹಸಚಿವ ಜಿ. ಪರಮೇಶ್ವರ್ (Home Minister G. Parameshwara) ಅವರು ಕ್ರೀಡಾ ಜ್ಯೋತಿ ರಥಕ್ಕೆ ಚಾಲನೆ ನೀಡಿದರು. ಗೃಹಸಚಿವರು ರಥದ ಚಾಲನೆ ಮಾಡುವಾಗ, ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಅವರು ಹಸಿರು ನಿಶಾನೆ ತೋರಿಸಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು.
ಗೃಹಸಚಿವರು ಮಾತನಾಡಿ, “ಪತ್ರಕರ್ತರು ಸದಾ ಒತ್ತಡದ ಕೆಲಸದಲ್ಲಿ ನಿರತರಾಗಿರುವುದರಿಂದ ದೈಹಿಕ ಚಟುವಟಿಕೆಗಳು ಅವರ ಆರೋಗ್ಯಕ್ಕೆ ಅಗತ್ಯವಾಗಿದೆ. ನಾನು ಸ್ವತಃ ಕ್ರೀಡಾಪಟುವಾಗಿದ್ದು, ಈ ಕ್ರೀಡಾಕೂಟ ಭಾಗವಾಗಿರುವುದು ಹೆಮ್ಮೆಯ ವಿಚಾರ” ಎಂದರು. “ಕ್ರೀಡೆ ಜನರನ್ನು ಸೌಹಾರ್ದಯುತವಾಗಿ ಬೆಸೆಯುತ್ತದೆ. ಈ ಕ್ರೀಡಾ ಜ್ಯೋತಿ ರಥದ ಮೂಲಕ ಸೌಹಾರ್ದ ಸಂದೇಶ ಎಲ್ಲೆಡೆ ಹರಡಲಿ” ಎಂದು ಪರಮೇಶ್ವರ್ ಹೇಳಿದರು.
ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, “ಈ ಬಾರಿ ತುಮಕೂರಿನಲ್ಲಿ ಕ್ರೀಡಾಕೂಟ ಆಯೋಜನೆಗೆ ಅವಕಾಶ ನೀಡಲಾಗಿದೆ. ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಈ ಕ್ರೀಡಾಕೂಟ ನಡೆಯಲಿದೆ” ಎಂದರು. ಜಿಲ್ಲಾಡಳಿತದಿಂದ ಕ್ರೀಡಾಕೂಟಕ್ಕೆ ಪೂರ್ಣ ಸಹಕಾರ ನೀಡಲಾಗುತ್ತಿದೆ. ರಾಜ್ಯದ ಎಲ್ಲ ಭಾಗಗಳಿಂದ ಬರುವ ಪತ್ರಕರ್ತರಿಗೆ ತುಮಕೂರಿನ ಆತಿಥ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾ ಅಧ್ಯಕ್ಷ ಚಿ.ನೀ. ಪುರುಷೋತ್ತಮ ಅವರು, “ಕ್ರೀಡಾ ಜ್ಯೋತಿ ಮೂರು ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸುತ್ತದೆ” ಎಂದರು. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಕೆ.ವಿ. ಅಶೋಕ್, ಶಾಸಕ ಜ್ಯೋತಿ ಗಣೇಶ್, ಮತ್ತಿತರರು ಭಾಗವಹಿಸಿದ್ದರು.
ತುಮಕೂರಿನಿಂದ ಹೊರಟ ಕ್ರೀಡಾ ಜ್ಯೋತಿ ರಥಕ್ಕೆ ಕುಣಿಗಲ್‌ನಲ್ಲಿ ಬೃಹತ್ ಮೆರವಣಿಗೆ ನಡೆಸಿ ಸ್ವಾಗತ ನೀಡಲಾಯಿತು.