Delhi: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagouda Patil Yatnal) ಅವರ ವಿರುದ್ಧ ಸಚಿವ ಶಿವಾನಂದ ಎಸ್. ಪಾಟೀಲ್ (Minister Shivanand S. Patil) ಹೂಡಿದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ 9Supreme Court) ಸೋಮವಾರ ತಳ್ಳಿ ಹಾಕಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಈ ಮೇಲ್ಮನವಿಯನ್ನು ವಜಾಗೊಳಿಸಿದ್ದು, “ನಿಮ್ಮ ರಾಜಕೀಯ ಹೋರಾಟ ಕೋರ್ಟ್ ಹೊರಗಿಡಿ” ಎಂದು ಸಲಹೆ ನೀಡಿತು.
ಅರ್ಜಿದಾರರ ಪರ ವಕೀಲರು, ಶಿವಾನಂದ ಪಾಟೀಲ್ ಕ್ಯಾಬಿನೆಟ್ ಮಟ್ಟದ ಸಚಿವರಾಗಿದ್ದಾರೆ ಎಂದು ಒತ್ತಿ ಹೇಳಿದರು. ಆದರೆ, ನ್ಯಾಯಮೂರ್ತಿಗಳು ಇದಕ್ಕೆ ಪ್ರತಿಯಾಗಿ, “ಅದಕ್ಕೆ ಏನಾಗಬೇಕು..? ಮೊದಲು ₹25,000 ದಂಡ ಹಾಕೋಣ, ಅಥವಾ ₹1 ಲಕ್ಷ ಹೇಗಿದೆ?” ಎಂದು ಪ್ರಶ್ನಿಸಿದರು.
ನಂತರ, ಮೇಲ್ಮನವಿ ಹಿಂಪಡೆಯಲು ಅನುಮತಿ ನೀಡಿದ ಪೀಠ, ಯಾವುದೇ ದಂಡವಿಲ್ಲದೆ ಅರ್ಜಿ ಹಿಂತೆಗೆದುಕೊಳ್ಳಲು ಅವಕಾಶ ನೀಡಿತು.
2023ರ ಲೋಕಸಭಾ ಚುನಾವಣಾ ರ‍್ಯಾಲಿಯ ಸಂದರ್ಭ, ಯತ್ನಾಳ್ ನೀಡಿದ ಹೇಳಿಕೆಗಳು ತಮ್ಮ ಖ್ಯಾತಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ, ಶಿವಾನಂದ ಪಾಟೀಲ್ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಆದರೆ ಹೈಕೋರ್ಟ್, ಪ್ರಕರಣ ದಾಖಲಿಸುವಲ್ಲಿ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (BNS) ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಲಾಗಿಲ್ಲವೆಂದು ಹೇಳಿ, ಮೊಕದ್ದಮೆಯನ್ನು ರದ್ದುಗೊಳಿಸಿತ್ತು.