
Bengaluru: ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದರೆಂದು ಆರೋಪಿಸಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ದಾಖಲಾದ FIR ಅನ್ನು ಹೈಕೋರ್ಟ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಆದರೆ, ಸೋಮವಾರ ಸುಪ್ರೀಂ ಕೋರ್ಟ್ ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿದ್ದು, ತೇಜಸ್ವಿಗೆ ಸುಲಭವಾಗಿ ರಿಲೀಫ್ ಸಿಕ್ಕಿದೆ. ಇದರೊಂದಿಗೆ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಈ ಅರ್ಜಿ ವಿಚಾರಣೆ ನಡೆಸಿದ್ದು, ಇದು ನ್ಯಾಯಾಂಗ ವೀಕ್ಷಣೆಗೆ ಒಳಪಟ್ಟ ವಿಷಯವಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾ ಮಾಡಿದೆ. ಈ ವೇಳೆ ಗರಂ ಆದ ಮುಖ್ಯ ನ್ಯಾಯಮೂರ್ತಿ, “ಈ ವಿಚಾರವನ್ನು ರಾಜಕೀಯಗೊಳಿಸಬೇಡಿ. ನ್ಯಾಯಾಲಯದ ಹೊರಗಡೆ ಹೋರಾಟ ಮಾಡಿ” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
2024ರ ನವೆಂಬರ್ 14ರಂದು ಹಾವೇರಿ ಸಿಇಎನ್ ಠಾಣೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ FIR ದಾಖಲಾಗಿತ್ತು. ಅವರು ಟ್ವಿಟರ್‌ನಲ್ಲಿ “ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂಬ ಸುಳ್ಳು ಸುದ್ದಿ ಹಂಚಿಕೊಂಡಿದ್ದಾರೆ ಎನ್ನಲಾಗಿತ್ತು. ನಂತರ ಅವರು ಆ ಟ್ವೀಟ್ ಅನ್ನು ಅಳಿಸಿದ್ದರು.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(2) ಅಡಿಯಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಹಾವೇರಿ ಸೈಬರ್ ಪೊಲೀಸ್ ಠಾಣೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 2024ರಲ್ಲಿ ಈ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು – ಆದರೆ ಅದು ಈಗ ತಿರಸ್ಕೃತವಾಗಿದೆ.