Peshawar: ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪೇಶಾವರದಲ್ಲಿ ಉಗ್ರರ ದಾಳಿ (Terrorist attack) ನಡೆದಿದ್ದು, ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೇಶಾವರದ ಹೊರವಲಯದಲ್ಲಿರುವ ಹಸನ್ ಖೇಲ್ ಪೊಲೀಸ್ ಠಾಣೆಯ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ನಡೆಸಿದರು. ಸಾವನ್ನಪ್ಪಿದವರನ್ನು ಕಾನ್ಸ್ಟೆಬಲ್ ಅಬು ಬಕರ್ ಎಂದು ಗುರುತಿಸಲಾಗಿದ್ದು, ಹರೂನ್ ಎಂಬ ಅಧಿಕಾರಿ ಗಾಯಗೊಂಡಿದ್ದಾರೆ.
ಮಾರಕ ಆಯುಧಗಳೊಂದಿಗೆ ಬಂದ ಭಯೋತ್ಪಾದಕರ ದಾಳಿಗೆ ಪೊಲೀಸರು ತೀವ್ರ ಪ್ರತಿದಾಳಿ ನಡೆಸಿ ಗುಂಡಿನ ಚಕಮಕಿಯಾಯಿತು. ಬಳಿಕ, ಎಚ್ಚರಿಕೆ ನೀಡಲಾಗಿದ್ದು, ಈ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ.
ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಮಿಲಿಟರಿ ಕಾರ್ಯಾಚರಣೆಯ ವೇಳೆ ಕೆಲವರ ಮನೆಗಳ ಮೇಲೆ ದಾಳಿ ನಡೆದು, ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಂದಿನ ದಿನಗಳಲ್ಲಿ ಟಿಟಿಪಿ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್) ಭದ್ರಕೋಟೆಯಾಗಿದ್ದ ಬಜೌರ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಪಾಕಿಸ್ತಾನಿ ಸೇನೆ ಮೂರು ದಿನಗಳ ಕಾರ್ಯಾಚರಣೆ ಆರಂಭಿಸಿದ್ದು, ಕಳೆದ ವಾರದಿಂದ ಸುಮಾರು 55,000 ಜನರನ್ನು ಸ್ಥಳಾಂತರಿಸಲಾಗಿದೆ. ಅವರಿಗೆ ಊಟ ವ್ಯವಸ್ಥೆ ಮಾಡಲಾಗಿದ್ದು, ಕೆಲ ರಸ್ತೆಗಳು ಮತ್ತು ಮಾರುಕಟ್ಟೆಗಳು ಪುನಃ ತೆರೆಯಲ್ಪಟ್ಟಿವೆ.