ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಮುಂಡಿ ಬೆಟ್ಟದಲ್ಲಿ ಚಾಲನೆ ದೊರೆಯಲಿದೆ. ವೃಶ್ಚಿಕ ಲಗ್ನದಲ್ಲಿ ಸಾಹಿತಿ ಭಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವ ಪ್ರಾರಂಭವಾಗಲಿದೆ.
ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಶುಚಿಗೊಳಿಸಿ ಹಸಿರು ಸೀರೆಯಿಂದ ಅಲಂಕರಿಸಲಾಗಿದೆ. ಬೆಳಿಗ್ಗೆ 10:10ರಿಂದ 10:40ರೊಳಗೆ ಅಭಿಷೇಕ ಮತ್ತು ಪೂಜೆ ನಡೆಯಲಿದೆ. ನಂತರ ಬೆಳ್ಳಿ ರಥದಲ್ಲಿ ಉತ್ಸವ ಮೂರ್ತಿಯನ್ನು ತರಲಾಗುವುದು.
ದೇವಾಲಯ ಆವರಣದಲ್ಲಿ ದೊಡ್ಡ ವೇದಿಕೆ ನಿರ್ಮಿಸಿ 1000 ಆಸನ ವ್ಯವಸ್ಥೆ ಮಾಡಲಾಗಿದೆ. ಮಳೆಗೆ ತೊಂದರೆಯಾಗದಂತೆ ಜರ್ಮನ್ ಟೆಂಟ್ ಹಾಕಲಾಗಿದೆ. ವಿಐಪಿ, ವಿವಿಐಪಿ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಬೆಟ್ಟದ ಸುತ್ತಮುತ್ತ ಕಠಿಣ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ನಡೆಯುತ್ತಿದ್ದರೆ, ಅರಮನೆಯಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಸಿಂಹಾಸನವನ್ನು ಅಲಂಕರಿಸಿ, 12:42ರಿಂದ 12:58ರೊಳಗೆ ದರ್ಬಾರ್ ನಡೆಯಲಿದೆ. ಪಟ್ಟದ ಆನೆ, ಕುದುರೆ, ಹಸು, ಮಹಿಳೆಯರು ಕಳಶ ಹೊತ್ತು ಭಾಗವಹಿಸಲಿದ್ದಾರೆ.
11 ದಿನಗಳ ಕಾಲ ಮೈಸೂರಿನಲ್ಲಿ ದಸರಾ ಉತ್ಸವ ನಡೆಯಲಿದ್ದು, ದೇಶ-ವಿದೇಶದ ಜನರನ್ನು ಆಕರ್ಷಿಸಲಿದೆ.
ಪ್ರಧಾನಿ ಮೋದಿ ಶುಭಾಶಯ: ನವರಾತ್ರಿ ಮೊದಲ ದಿನದಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಈ ಬಾರಿ ಹಬ್ಬ “GST ಉಳಿತಾಯ ಹಬ್ಬ”ವಾಗಿಯೂ ವಿಶೇಷವಾಗಲಿದೆ ಎಂದು ಹೇಳಿದರು.
ಹೊಸ ಜಿಎಸ್ಟಿ ದರಗಳು ಜಾರಿಯಾಗುವುದರಿಂದ ಬಡವರು, ಮಧ್ಯಮ ವರ್ಗ, ರೈತರು, ವ್ಯಾಪಾರಿಗಳು ಸೇರಿದಂತೆ ಹಲವರಿಗೆ ಲಾಭವಾಗಲಿದೆ. ಇದು ಆತ್ಮನಿರ್ಭರ ಭಾರತಕ್ಕೆ ದೊಡ್ಡ ಹೆಜ್ಜೆಯಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಮೋದಿ ಜನರಿಗೆ ಸ್ವದೇಶಿ ವಸ್ತುಗಳನ್ನು ಖರೀದಿಸಲು ಕರೆ ನೀಡಿದರು. ಪ್ರತಿಯೊಂದು ಮನೆ ಹಾಗೂ ಅಂಗಡಿಯನ್ನು ಸ್ವದೇಶಿ ಉತ್ಪನ್ನಗಳಿಂದ ಅಲಂಕರಿಸಬೇಕು ಎಂದರು.