Chikkaballapur: “ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಸಂಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟಪಡಿಸಿದ್ದಾರೆ.
ಇಂದು ನಂದಿಗಿರಿಧಾಮದಲ್ಲಿ ನಡೆಯುವ ಸಚಿವ ಸಂಪುಟ ಸಭೆಗೂ ಮುನ್ನ, ಸಿದ್ದರಾಮಯ್ಯ ಹಾಗೂ ಸಚಿವರು ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇವಾಲಯದ ಎದುರು ಫೋಟೋ ಶೂಟ್ ಕೂಡ ನಡೆಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ಬಿಜೆಪಿ ಸೇಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಅಂತಾ ಸುಳ್ಳು ಹೇಳ್ತಿದೆ. ನಮ್ಮ ಸರ್ಕಾರ ಬಂಡೆಯಂತೆ ಇದೆ. ನಾವು ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಅಸಮ್ಮತಿ ಇಲ್ಲ. ಬಿಜೆಪಿ ತನ್ನ ಆಡಳಿತ ಕಾಲದ ಸಾಧನೆಗಳನ್ನೇ ಹೇಳಲಿ” ಎಂದು ತಿರುಗೇಟು ನೀಡಿದರು.
ರಾಜ್ಯದ ಪ್ರತಿ ವಿಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಈ ಬಾರಿ ಬೆಂಗಳೂರು ವಿಭಾಗದ ಸಭೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲ, ಇಡೀ ವಿಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿದೆ.
“ಇಂದಿನ ಸಭೆಯಲ್ಲಿ ಹೊಸ ಘೋಷಣೆಗಳಿಲ್ಲ. ಬಜೆಟ್‌ನಲ್ಲಿ ಹೇಳಿದ ಯೋಜನೆಗಳನ್ನು ಅನುಷ್ಠಾನಗೊಳಿಸುವುದರತ್ತ ಒತ್ತು ಇರುತ್ತದೆ. ಚಿಕ್ಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ” ಎಂದು ತಿಳಿಸಿದರು.
“ಜಾತಿ ಸಮೀಕ್ಷೆ 3 ಹಂತಗಳಲ್ಲಿ ನಡೆಯುತ್ತಿದೆ. ಮನೆಬಾಗಿಲಿಗೆ ಅಧಿಕಾರಿಗಳು ಬರುವದೋ, ಬೂತ್ ಸಭೆಗಳಲ್ಲೋ ಅಥವಾ online ಮೂಲಕವೋ – ಜನರು ಅನುಕೂಲಕರ ಮಾರ್ಗದಲ್ಲಿ ತಮ್ಮ ಜಾತಿಯನ್ನು ನೋಂದಾಯಿಸಬಹುದು” ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ: “ಸಿದ್ದರಾಮಯ್ಯ ಸಿಎಂ ಆಗಿರೋರಾಗ ಇನ್ನೊಬ್ಬರ ಹೆಸರು ಏಕೆ ಎತ್ತಬೇಕು?” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
“ಪಕ್ಷ ಕಟ್ಟಲು ನಾನೊಬ್ಬನೇ ಪ್ರಯತ್ನಿಸಿದ್ದೇನೇ? ಸಾವಿರಾರು ಜನ ಸೇರಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು” ಎಂದು ಹೇಳಿದರು.
“ಪಕ್ಷದಲ್ಲಿ ಶಿಸ್ತು ಮುಖ್ಯ. ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ನೀಡಲಾಗಿದೆ, ಅಷ್ಟೇ ಅಲ್ಲ ಇನ್ನೂ ನೀಡಲಾಗಬಹುದು” ಎಂದರು.
“ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಚುನಾವಣೆ ತಯಾರಿ ಬಗ್ಗೆ ಚರ್ಚಿಸಲು ಬಂದಿದ್ದಾರೆ. ಪಕ್ಷದಲ್ಲಿ ಅಸಮಾಧಾನವಿಲ್ಲ” ಎಂದು ಸಿಎಂ ಸ್ಪಷ್ಟಪಡಿಸಿದರು.
“ಮಾಗಡಿಯ ನಾಡಪ್ರಭು ಕೆಂಪೇಗೌಡ ಸ್ಮಾರಕ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ‘ಬೆಂಗಳೂರು ಉತ್ತರ’ ಎಂದು ಮರುನಾಮಕರಣ ಮಾಡುವ ಬೇಡಿಕೆ ಸೇರಿದಂತೆ ಹಲವಾರು ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ” ಎಂದು ಅವರು ತಿಳಿಸಿದರು.