Bengaluru: ಸಾಮಾನ್ಯ ಜನರ ಜೀವನದ ಆರ್ಥಿಕ ಭಾರವನ್ನು ಮತ್ತಷ್ಟು ಹೆಚ್ಚಿಸುತ್ತಾ, ಕೇಂದ್ರದ ಮೋದಿ ಸರ್ಕಾರ ರೈಲ್ವೆ ಟಿಕೆಟ್ ದರ ಏರಿಕೆ ಘೋಷಿಸಿದ್ದು, ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು ಹೇಳಿದ್ದಾರೆ: “ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಗಳು ನಿರಂತರವಾಗಿ ಏರುತ್ತಿರುವಾಗ ಜನ ಸಾಮಾನ್ಯರು ಈಗಾಗಲೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಲು, ಮೊಸರು, ಚಹಾ ಪುಡಿ, ಪಾಪ್‌ಕಾರ್ನ್ ಸೇರಿ ಅನೇಕ ದೈನಂದಿನ ಉಪಯೋಗದ ವಸ್ತುಗಳ ಮೇಲೂ GST ವಿಧಿಸಲಾಗಿದೆ. ಇದರಿಂದಾಗಿ ಪ್ರತಿ ಮನೆಯ ಬಜೆಟ್ ಗೆ ಏರುಪೇರಾಗಿದೆ. ಇಂತಹ ಸಂದರ್ಭದಲ್ಲಿ ರೈಲು ಪ್ರಯಾಣದ ದರ ಹೆಚ್ಚಿಸುವುದು ಜನರ ಜೇಬು ಖಾಲಿ ಮಾಡುವ ಪ್ರಯತ್ನವಾಗಿದೆ.”
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, “ನಮ್ಮ ಸರ್ಕಾರ ಹಾಲಿನ ಬೆಲೆ ಏರಿಸಿದಾಗ ಜನವಿರೋಧಿ ಎಂದು ಆರೋಪಿ ಹಾಕಿದ ಬಿಜೆಪಿ ನಾಯಕರು, ಈಗ ಅವರದೇ ಕೇಂದ್ರ ಸರ್ಕಾರ ರೈಲು ದರ ಹೆಚ್ಚಿಸಿದರೂ ನಿಶ್ಶಬ್ದರಾಗಿದ್ದಾರೆ. ಮೆಟ್ರೋ ದರ ಏರಿಕೆಯ ವೇಳೆ ಪ್ರತಿಭಟನೆಯ ನಾಟಕವಾಡಿದ ಅವರು, ಈಗ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡುತ್ತಿದ್ದಾರೆ,” ಎಂದು ಟೀಕಿಸಿದರು.
“ರೈಲ್ವೆ ಇಲಾಖೆ ಪೂರ್ಣವಾಗಿ ಕೇಂದ್ರದ ಸ್ವಾಮ್ಯದಲ್ಲಿದೆ. ಇಡೀ ವಿಶ್ವದಲ್ಲೇ ಅತ್ಯಧಿಕ ಪ್ರಯಾಣಿಕರು ಬಳಸುವ ಈ ವ್ಯವಸ್ಥೆ ಲಾಭದಾಯಕವಾಗಿರುವಾಗಲೂ ದರ ಏರಿಕೆ ಅವಶ್ಯಕವೇನು? ರೈಲ್ವೆ ಇಲಾಖೆಯ ಬಜೆಟ್ ಪ್ರತ್ಯೇಕವಾಗಿ ಮಂಡನೆ ಮಾಡುವ ಪ್ರಕ್ರಿಯೆ ಕೈಬಿಟ್ಟಿರುವುದರಿಂದ ಪಾರದರ್ಶಕತೆ ಕಡಿಮೆಯಾಗಿದೆ. ಆದ್ದರಿಂದ, ಈ ದರ ಏರಿಕೆಯ ಮೊದಲು ಶ್ವೇತಪತ್ರವೊಂದನ್ನು ದೇಶದ ಜನತೆಗೆ ಬಿಡುಗಡೆ ಮಾಡಬೇಕು,” ಎಂದು ಅವರು ಆಗ್ರಹಿಸಿದರು.