ದುಬೈನಲ್ಲಿ ಭಾನುವಾರ ನಡೆದ ರೋಚಕ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಏಷ್ಯಾಕಪ್ ಗೆದ್ದಿತು. ಆದರೆ ಪಂದ್ಯದ ನಂತರ ಕ್ರಿಕೆಟ್ ಲೋಕದಲ್ಲಿ ಯಾರೂ ನಿರೀಕ್ಷಿಸದ ನಾಟಕೀಯ ಘಟನೆಗಳು ನಡೆಯಿತು.
ಪಂದ್ಯ ಮುಗಿದ ತಕ್ಷಣ ಆಟಗಾರರು ಕುಟುಂಬ ಸದಸ್ಯರೊಂದಿಗೆ ಮೈದಾನಕ್ಕಿಳಿದು ಸಂಭ್ರಮಿಸಿದರು. ಆದರೆ ಎಸಿಸಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರಶಸ್ತಿ ವಿತರಣೆಯಲ್ಲಿ ಭಾಗಿಯಾಗುವುದರಿಂದ ಭಾರತ ತಂಡ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತು.
ಪಾಕಿಸ್ತಾನ ಆಟಗಾರರು ವೇದಿಕೆಗೆ ಬರದೇ ಕಾರ್ಯಕ್ರಮ ವಿಳಂಬವಾಯಿತು. ಬಳಿಕ ವೈಯಕ್ತಿಕ ಪ್ರಶಸ್ತಿಗಳು ಮಾತ್ರ ವಿತರಿಸಲಾಯಿತು. ರನ್ನರ್‌ಅಪ್ ನಗದು ಚೆಕ್ ಸ್ವೀಕರಿಸುವಾಗ ಪಾಕ್ ನಾಯಕ ಅಘಾ ಅದನ್ನು ವೇದಿಕೆಯಿಂದ ಎಸೆದು ಹೋದ ಘಟನೆಯೂ ನಡೆಯಿತು.
ನಂತರ ನಖ್ವಿ ಟ್ರೋಫಿಯೊಂದಿಗೆ ಹೊರಟ ಕಾರಣ ಗೊಂದಲ ಉಂಟಾಯಿತು. ಭಾರತ ತಂಡ ಟ್ರೋಫಿ ಇಲ್ಲದೇ ಸಹಾಯಕ ಸಿಬ್ಬಂದಿಯೊಂದಿಗೆ ಫೋಟೋ ಸೆಷನ್ ಮಾಡಿ ಜಯೋತ್ಸವ ಆಚರಿಸಿತು.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ನಾವು ಏಷ್ಯಾಕಪ್ ಟ್ರೋಫಿ ಸ್ವೀಕರಿಸುವುದಿಲ್ಲವೆಂದು ತೀರ್ಮಾನಿಸಿದ್ದೇವೆ. ಟ್ರೋಫಿ ಮತ್ತು ಪದಕಗಳನ್ನು ಸಾಧ್ಯವಾದಷ್ಟು ಬೇಗ ಹಿಂದಿರುಗಿಸಬೇಕು” ಎಂದು ಹೇಳಿದ್ದಾರೆ.
ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಬಿಸಿಸಿಐ, ನಖ್ವಿಯನ್ನು ಎಸಿಸಿಯಿಂದ ಹೊರಹಾಕಲು ಕ್ರಮ ಕೈಗೊಳ್ಳಲಿದೆ. ನವೆಂಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಭಾರತ ಬಲವಾದ ಪ್ರತಿಭಟನೆ ಸಲ್ಲಿಸಲಿದೆ.