New Delhi: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದೆ ಎಂಬ ಆರೋಪದೊಂದಿಗೆ ಪ್ರಮುಖ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ (New York Times) ವಿರುದ್ಧ 15 ಬಿಲಿಯನ್ ಡಾಲರ್ (ಸುಮಾರು ₹1.30 ಲಕ್ಷ ಕೋಟಿ) ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಟ್ರುತ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ನ್ಯೂಯಾರ್ಕ್ ಟೈಮ್ಸ್ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹದಗೆಟ್ಟ, ಪಕ್ಷಪಾತಿ ಪತ್ರಿಕೆ. ಇದು ನನ್ನ, ನನ್ನ ಕುಟುಂಬ ಮತ್ತು ನನ್ನ ವ್ಯವಹಾರಗಳ ವಿರುದ್ಧ ನಿರಂತರ ಸುಳ್ಳು ಸುದ್ದಿ ಪ್ರಕಟಿಸುತ್ತಿದೆ. ಹೀಗಾಗಿ ಕಾನೂನು ಹೋರಾಟಕ್ಕೆ ಇಳಿಯುತ್ತೇನೆ” ಎಂದು ಘೋಷಿಸಿದ್ದಾರೆ.
ಅವರು, ಈ ಪತ್ರಿಕೆ ಮಾಜಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ಬಹಿರಂಗ ಬೆಂಬಲ ನೀಡಿದ್ದು, ಮುಖಪುಟದಲ್ಲಿ ದೊಡ್ಡ ಚಿತ್ರವನ್ನು ಪ್ರಕಟಿಸಿದ ಉದಾಹರಣೆ ನೀಡಿದ್ದಾರೆ. ಜೊತೆಗೆ, “ಇದಕ್ಕೂ ಮುನ್ನ ಎಬಿಸಿ, ಡಿಸ್ನಿ, ಸಿಬಿಎಸ್ ಮುಂತಾದ ಮಾಧ್ಯಮಗಳ ವಿರುದ್ಧ ಕೇಸ್ ಹೂಡಿ ಬುದ್ಧಿ ಕಲಿಸಿದ್ದೆವು. ಈಗ ನ್ಯೂಯಾರ್ಕ್ ಟೈಮ್ಸ್‌ನಿಗೂ ಅದೇ ಪಾಠ ಕಲಿಸಲಾಗುವುದು” ಎಂದಿದ್ದಾರೆ.
ಟ್ರಂಪ್ ಪ್ರಕಾರ, ಪತ್ರಿಕೆಯ ವರದಿಗಳು ದುರುದ್ದೇಶಪೂರಿತವಾಗಿದ್ದು, ತಮ್ಮ ಚಳವಳಿ ಮತ್ತು ರಾಷ್ಟ್ರದ ಹಿತವನ್ನು ಹಾಳುಮಾಡುವ ರೀತಿಯಲ್ಲಿವೆ. “ಇನ್ನು ಮುಂದೆ ಸುಳ್ಳು ಸುದ್ದಿಗಳಿಗೆ ಫುಲ್ಸ್ಟಾಪ್ ಹಾಕುತ್ತೇನೆ“ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.