Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಂಪ್ಯೂಟರ್ ಚಿಪ್ ಮತ್ತು ಸೆಮಿಕಂಡಕ್ಟರ್ ಆಮದುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಹೇಳಿದ್ದಾರೆ.
ಗುರುವಾರ ರಾತ್ರಿ ಟೆಕ್ ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಅವರು, “ಶೀಘ್ರದಲ್ಲೇ ಗಣನೀಯ ಸುಂಕ ವಿಧಿಸಲಾಗುವುದು. ಇದು ದುಬಾರಿ ಅಲ್ಲ, ಆದರೆ ಸುಸ್ಥಿರ” ಎಂದು ತಿಳಿಸಿದರು. ಆದರೆ ಜಾರಿ ದಿನಾಂಕ ಅಥವಾ ವಿವರಗಳನ್ನು ಸ್ಪಷ್ಟಪಡಿಸಲಿಲ್ಲ.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಟ್ರಂಪ್, ಅಮೆರಿಕದಲ್ಲಿ ಹೂಡಿಕೆ ಮಾಡದ ಸಂಸ್ಥೆಗಳ ಚಿಪ್ ಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಬಗ್ಗೆ ಹೇಳಿದ್ದರು. ಈ ಘೋಷಣೆ ಏಷ್ಯಾದ ಚಿಪ್ ಕಂಪನಿಗಳ ಷೇರುಗಳಲ್ಲಿ ಏರಿಳಿತ ಉಂಟುಮಾಡಿತ್ತು.
ಅಮೆರಿಕದೊಳಗೆ ಚಿಪ್ ತಯಾರಿಸುವ ಕಂಪನಿಗಳಿಗೆ ಈ ಸುಂಕ ಅನ್ವಯಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು.
ಅಮೆರಿಕ ಮತ್ತು ಚೀನಾ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಅಗತ್ಯವಿರುವ ಉನ್ನತಮಟ್ಟದ ಸೆಮಿಕಂಡಕ್ಟರ್‌ಗಳ ತಯಾರಿಕೆಯಲ್ಲಿ ತೀವ್ರ ಪೈಪೋಟಿ ನಡೆಸುತ್ತಿವೆ.
ತೈವಾನ್ ಮೂಲದ ಸಂಶೋಧಕಿ ಅರಿಸಾ ಲಿಯು, ಅಮೆರಿಕದ ಈ ಕ್ರಮ ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳ ಕಾರ್ಯತಂತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಇದಕ್ಕೂ ಮುನ್ನ ಅಮೆರಿಕದ ಮೇಲ್ಮನವಿ ಕೋರ್ಟ್, ಟ್ರಂಪ್ ಆಡಳಿತದ ಸುಂಕ ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಇದಕ್ಕೆ ಪ್ರತಿಯಾಗಿ ಟ್ರಂಪ್, ಸುಪ್ರೀಂ ಕೋರ್ಟ್ ತ್ವರಿತ ತೀರ್ಪು ನೀಡಬೇಕು ಎಂದು ಮನವಿ ಮಾಡಿದ್ದರು.
ಟ್ರಂಪ್ ಅವರ ಸುಂಕ ನೀತಿ ಜಾರಿಗೆ ಬಂದರೆ ಜಾಗತಿಕ ಚಿಪ್ ಮಾರುಕಟ್ಟೆ ಮತ್ತು ತಂತ್ರಜ್ಞಾನ ವಲಯದಲ್ಲಿ ದೊಡ್ಡ ಬದಲಾವಣೆ ಸಾಧ್ಯ.