
New Delhi: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ತೀವ್ರವಾಗಿ ಟೀಕಿಸಿ, ಭಾರತದ ಆರ್ಥಿಕತೆಯನ್ನು “ಸತ್ತ ಆರ್ಥಿಕತೆ” ಎಂದು ನಿಂದಿಸಿದ್ದಾರೆ. ರಷ್ಯಾ ಜೊತೆ ಭಾರತದ ವ್ಯಾಪಾರದ (Russia-India economy) ಬಗ್ಗೆ ಕಿಡಿಕಾರಿದ ಟ್ರಂಪ್, “ಭಾರತ ಮತ್ತು ರಷ್ಯಾ ಎರಡೂ ಸತ್ತ ಆರ್ಥಿಕತೆಗಳು ಸೇರಿ ನೆಲಕಚ್ಚಲಿ” ಎಂದು ಹೇಳಿ ಹಿಡಿಶಾಪ ಹಾಕಿದ್ದಾರೆ.
ಈ ಹೇಳಿಕೆಯ ಹಿಂದೆಯೇ, ಆಗಸ್ಟ್ 1ರಿಂದ ಭಾರತದ ಉತ್ಪನ್ನಗಳ ಮೇಲೆ ಶೇ. 25ರಷ್ಟು ಸುಂಕ (ಟ್ಯಾರಿಫ್) ವಿಧಿಸುತ್ತೇವೆ ಎಂಬ ಘೋಷಣೆ ಅವರು ಮಾಡಿದ್ದಾರೆ.
ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ, “ಭಾರತ ನಮ್ಮೊಂದಿಗೆ ಕಡಿಮೆ ವ್ಯಾಪಾರ ಮಾಡುತ್ತದೆ. ಆದರೆ ಭಾರತ ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಸುಂಕ ವಿಧಿಸುತ್ತಿದೆ. ಭಾರತ ಪ್ರಪಂಚದಲ್ಲೇ ಅತ್ಯಧಿಕ ಸುಂಕ ಹಾಕುವ ದೇಶಗಳಲ್ಲಿ ಒಂದು” ಎಂದು ಆರೋಪಿಸಿದ್ದಾರೆ.
ಅಮೆರಿಕ ಭಾರತದ ದೊಡ್ಡ ಮಾರುಕಟ್ಟೆಯಾಗಿದ್ದರೂ, ಭಾರತದಿಂದ ಅಮೆರಿಕಕ್ಕೆ ಬೃಹತ್ ವ್ಯಾಪಾರ ನಷ್ಟ (ಟ್ರೇಡ್ ಡೆಫಿಸಿಟ್) ಉಂಟಾಗಿದೆ – ಸುಮಾರು 40 ಬಿಲಿಯನ್ ಡಾಲರ್ ಮಟ್ಟಿಗೆ. ಇದು ಟ್ರಂಪ್ ಅವರಿಗೆ ಅಸಹನೀಯವಾಗಿದೆ.
ಇದರ ಜತೆಗೆ, ರಷ್ಯಾ ಮತ್ತು ಅಮೆರಿಕ ನಡುವೆ ಯಾವುದೇ ವ್ಯಾಪಾರ ಸಂಬಂಧ ಇಲ್ಲ. ಟ್ರಂಪ್ ಇದನ್ನು ಉಳಿಸಬೇಕು ಎಂದು ಸೂಚಿಸಿದ್ದಾರೆ ಮತ್ತು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರನ್ನು ಕಿಡಿಕಾರಿದ್ದಾರೆ.
ಟ್ರಂಪ್ ನೀಡಿದ ಉಕ್ರೇನ್ ಸಂಬಂಧಿತ ಹೇಳಿಕೆಗೆ ಪ್ರತಿಯಾಗಿ ಮೆಡ್ವೆಡೆವ್, “ಈ ರೀತಿ ಎಚ್ಚರಿಕೆ ಹೇಳಿದರೆ, ಅದು ಯುದ್ಧಕ್ಕೆ ದಾರಿ ಮಾಡುತ್ತದೆ” ಎಂದು ತಿರುಗೇಟು ನೀಡಿದ್ದಾರೆ. ಅವರು ಎಚ್ಚರಿಕೆ ನೀಡಿರುವುದರಿಂದ, ಇದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗಂಭೀರ ಪ್ರಭಾವ ಬೀರುವ ಸಾಧ್ಯತೆ ಇದೆ.