Washington: ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸದಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump Threatens) ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಅಮೆರಿಕಾ ಮತ್ತು ಇರಾನ್ ಅಧಿಕಾರಿಗಳು ಮಾತುಕತೆ ನಡೆಸುತ್ತಿರುವುದಾಗಿ ದೃಢಪಡಿಸಿದರು. “ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ನಾವು ಬಾಂಬ್ ದಾಳಿ ನಡೆಸಬೇಕಾಗುತ್ತದೆ. ಅವರು ಹಿಂದಿನದಕ್ಕಿಂತ ಭಿನ್ನವಾದ ದಾಳಿಯನ್ನು ಎದುರಿಸಬೇಕಾಗಬಹುದು,” ಎಂದು ಅವರು ಹೇಳಿದರು.
ಟ್ರಂಪ್ ಅವರಿಂದ ಪತ್ರ ಬಂದ ನಂತರ, ಇರಾನ್ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸಲು ನಿರಾಕರಿಸಿದೆ. ಆದರೆ, ಪರೋಕ್ಷ ಮಾತುಕತೆಗಳ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
2018ರಲ್ಲಿ ಟ್ರಂಪ್ ಅಮೆರಿಕವನ್ನು ಇರಾನ್ ಪರಮಾಣು ಒಪ್ಪಂದದಿಂದ ಹಿಂದಕ್ಕೆ ಕರೆಸಿಕೊಂಡರು. ಇದರಿಂದ ಇರಾನ್ ಮೇಲೆ ತೀವ್ರ ಆರ್ಥಿಕ ನಿರ್ಬಂಧಗಳು ಮತ್ತೆ ಹೇರಲಾಯಿತು. ಜನವರಿ 2020ರಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್ ಜನರಲ್ ಖಾಸೆಮ್ ಸೊಲೈಮಾನಿ ಹತ್ಯೆಯಾದ ಬಳಿಕ, ಉಭಯ ದೇಶಗಳ ಸಂಬಂಧಗಳು ಮತ್ತಷ್ಟು ಹದಗೆಟ್ಟವು.
ಟ್ರಂಪ್ ಅಮೆರಿಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ, ಇರಾನ್ ಮೇಲೆ ಗರಿಷ್ಠ ಒತ್ತಡ ಹೇರುವ ನೀತಿ ಜಾರಿಗೆ ಬಂದಿದೆ. ಇದರಿಂದ ಇರಾನ್ ಕರೆನ್ಸಿ ರಿಯಾಲ್ ಮತ್ತಷ್ಟು ಕುಸಿದಿದೆ.