Washington: ವಿಶ್ವ ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (President Donald Trump) ಆಟೋಮೊಬೈಲ್ ವಲಯದ ಮೇಲೆ ವಿಧಿಸಿದ್ದ ಸುಂಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ (temporary tariff exemption) ಕುರಿತು ಸೂಚನೆ ನೀಡಿದ್ದಾರೆ. ಈ ನಿರ್ಧಾರದಿಂದ ಕಾರು ತಯಾರಕರು ತಮ್ಮ ಪೂರೈಕೆ ಸರಪಳಿಯನ್ನು ಸರಿಹೊಂದಿಸಿಕೊಳ್ಳಲು ಹೆಚ್ಚು ಸಮಯ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.
“ಕೆಲವು ಕಂಪನಿಗಳಿಗೆ ಸಹಾಯ ಮಾಡಲು ನಾನು ಏನಾದರೂ ಮಾಡಬೇಕೆಂದು ಭಾವಿಸಿದ್ದೇನೆ,” ಎಂದು ಅವರು ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಉತ್ಪಾದನೆ ಸ್ಥಳಾಂತರಿಸಲು ಕಂಪನಿಗಳಿಗೆ ಸಮಯ ಬೇಕು ಎಂಬುದಾಗಿ ಅವರು ಹೇಳಿದರು.
ಅಮೆರಿಕದ ಪ್ರಮುಖ ಕಾರು ತಯಾರಕರನ್ನು ಪ್ರತಿನಿಧಿಸುವ ಸಂಸ್ಥೆಯಾದ ಅಮೆರಿಕನ್ ಆಟೋಮೋಟಿವ್ ಪಾಲಿಸಿ ಕೌನ್ಸಿಲ್ ಅಧ್ಯಕ್ಷ ಮ್ಯಾಟ್ ಬ್ಲಂಟ್ ಅವರು, “ಈ ಸುಂಕಗಳು ಉದ್ಯಮದ ಬೆಳವಣಿಗೆಗೆ ತೊಂದರೆ ನೀಡಬಹುದು. ಸರಪಳಿ ಬದಲಾವಣೆಗೆ ಹೆಚ್ಚಿನ ಸಮಯ ಬೇಕಾಗಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ವಾಲ್ ಸ್ಟ್ರೀಟ್ ಅರ್ಥಶಾಸ್ತ್ರಜ್ಞರು ಟ್ರಂಪ್ ಅವರ ನಿಲುವು ಮತ್ತೆ ಸುಂಕ ಮರುಪರಿಶೀಲನೆಯ ಸುಳಿವು ಎಂದು ವಿವರಿಸಿದ್ದಾರೆ. ಈ ಹಿಂದೆ ಮಾರ್ಚ್ 27ರಂದು ಘೋಷಿತ 25% ಆಟೋ ಸುಂಕಗಳು ಮಾರುಕಟ್ಟೆಗಳಲ್ಲಿ ಆತಂಕ ಹುಟ್ಟಿಸಿತ್ತು. ಅದರ ಪರಿಣಾಮವಾಗಿ ಬಾಂಡ್ ಮಾರುಕಟ್ಟೆ ಕುಸಿತ ಕಂಡಿತ್ತು.
ಚೀನಾ ಹೊರತುಪಡಿಸಿ ಇತರ ರಾಷ್ಟ್ರಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದ್ದು, ಚೀನಾದ ಮೇಲಿನ ಆಮದು ಸುಂಕಗಳನ್ನು ಟ್ರಂಪ್ ಶೇ.145 ರಷ್ಟು ಹೆಚ್ಚಿಸಿದ್ದಾರೆ. ಆದರೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ವಿನಾಯಿತಿ ನೀಡಿದ್ದಾರೆ.
“ಮನಸ್ಸು ಬದಲಾಗದು, ಹೊಂದಿಕೊಳ್ಳುತ್ತೇನೆ”: ಟ್ರಂಪ್, “ನಾನು ನನ್ನ ನಿಲುವು ಬದಲಾಯಿಸಲ್ಲ, ಆದರೆ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ. ಈ ಮಾತುಗಳು ಅವರ ಗುರಿಗಳ ಬಗ್ಗೆ ಗೊಂದಲ ಸೃಷ್ಟಿಸುತ್ತಿವೆ ಎಂಬ ಅಭಿಪ್ರಾಯವಿದೆ.
ಈ ಹೇಳಿಕೆಯ ಬಳಿಕ ಅಮೆರಿಕದ ಶೇರು ಮಾರುಕಟ್ಟೆ S&P 500 ಶೇ.0.8ರಷ್ಟು ಏರಿಕೆಯಾಗಿದೆ. ಬಾಂಡ್‌ಗಳ ಬಡ್ಡಿದರಗಳು ಶೇ.4.5ರ ಮಟ್ಟಕ್ಕೆ ಏರಿದವು.
ನಾರ್ದರ್ನ್ ಟ್ರಸ್ಟ್ ನ ಮುಖ್ಯ ಆರ್ಥಶಾಸ್ತ್ರಜ್ಞ ಕಾರ್ಲ್ ಟ್ಯಾನೆನ್ಬಾಮ್, “ಈ ನಿಲುವು ಗ್ರಾಹಕರ ವಿಶ್ವಾಸ ಹಾಗೂ ಮಾರುಕಟ್ಟೆಯ ಸ್ಥಿರತೆಗೆ ಹಾನಿ ಮಾಡಬಹುದು” ಎಂದು ಎಚ್ಚರಿಸಿದ್ದಾರೆ.
ಯುರೋಪಿಯನ್ ಕಮಿಷನರ್ ಮಾರೊಸ್ ಸೆಫ್ಕೊವಿಕ್ ಅವರು, ಅಮೆರಿಕದ ವಾಣಿಜ್ಯ ಪ್ರತಿನಿಧಿಗಳೊಂದಿಗೆ ವ್ಯಾಪಾರದ ಮಾತುಕತೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ಯುರೋಪ್ ನ್ಯಾಯಸಮ್ಮತ ಒಪ್ಪಂದಕ್ಕೆ ಸಿದ್ಧವಿದ್ದು, ಕೈಗಾರಿಕಾ ವಸ್ತುಗಳ ಮೇಲೆ ಶೂನ್ಯ ಸುಂಕ ಕೊಡುಗೆ ನೀಡಲು ತಯಾರಿದೆ ಎಂದು ತಿಳಿಸಿದ್ದಾರೆ.