Mumbai: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಇಂದು ವಿಧಾನ ಪರಿಷತ್ತಿನಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, (Uddhav Thackeray) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಕ್ಷಮೆ ಯಾಚಿಸಿದ್ದು ಹಾಗೂ ಬಿಜೆಪಿ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾಗಿ ಅವರು ಆರೋಪಿಸಿದ್ದಾರೆ.
ಶಿಂಧೆಯ ಪ್ರಕಾರ, ಉದ್ಧವ್ ಠಾಕ್ರೆ ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದರೂ, ಮುಂಬೈಗೆ ಹಿಂತಿರುಗಿದ ಬಳಿಕ ತಮ್ಮ ನಿಲುವನ್ನು ಬದಲಾಯಿಸಿದರು. ಈ ವಿಚಾರವನ್ನು ಬಹಿರಂಗಪಡಿಸಿದ ಶಿಂಧೆ, ಇದು “ಒಳಗಿನ ಕಥೆ” ಎಂದು ಹೇಳಿದರು.
ಬಿಜೆಪಿಯೊಂದಿಗೆ ಹಿಂಬಾಗಿಲಿನ ಮಾತುಕತೆ ನಡೆಸಿದ್ದ ಶಿವಸೇನೆ (ಯುಬಿಟಿ) ನಾಯಕ ಅನಿಲ್ ಪರಬ್ ಕೂಡ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೆಂದು ಶಿಂಧೆ ಆರೋಪಿಸಿದರು. ಅನಿಲ್ ಪರಬ್, ಒಂದು ಪ್ರಕರಣದ ಸಂಬಂಧ ರಕ್ಷಣೆಗೆ ಬಿಜೆಪಿ ನಾಯಕರನ್ನು ಸಂಪರ್ಕಿಸಿದ್ದರೆಯೆಂದು ಅವರು ಆರೋಪಿಸಿದರು.
ಎಂವಿಎ ಸರ್ಕಾರದಿಂದ ಬೇರ್ಪಟ್ಟ ನಿರ್ಧಾರವನ್ನು ಸಮರ್ಥಿಸಿಕೊಂಡ ಶಿಂಧೆ, “ನಾವು ಎಲ್ಲವನ್ನೂ ಬಹಿರಂಗವಾಗಿ ಮಾಡಿದ್ದೇವೆ. ಗುಟ್ಟಾಗಿ ಏನನ್ನೂ ಮಾಡಿಲ್ಲ. ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಅಪಾಯದಲ್ಲಿದ್ದಾಗ ನಾವು ನಿಲುವು ತೆಗೆದುಕೊಂಡೆವು” ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ಉದ್ಧವ್ ಠಾಕ್ರೆ ಹಾಗೂ ಶಿವಸೇನೆ (ಯುಬಿಟಿ) ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.