Delhi: ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ (UN) ಸಾಮಾನ್ಯ ಸಭೆಯ 80ನೇ ವಾರ್ಷಿಕ ಉನ್ನತ ಮಟ್ಟದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಚರ್ಚೆಯಲ್ಲಿ ಮಾತನಾಡುವುದಿಲ್ಲ ಎಂದು ವಿಶ್ವಸಂಸ್ಥೆ ತಿಳಿಸಿದ್ದಾರೆ. ಬಿಡುಗಡೆ ಮಾಡಿದ ತಾತ್ಕಾಲಿಕ ಭಾಷಣಕಾರರ ಪಟ್ಟಿಯಲ್ಲಿ ಮೋದಿ ಅವರ ಹೆಸರು ಇಲ್ಲ.
ಅಧಿವೇಶನವು ಸೆಪ್ಟೆಂಬರ್ 9ರಿಂದ ಪ್ರಾರಂಭವಾಗಲಿದೆ ಮತ್ತು ಉನ್ನತ ಮಟ್ಟದ ಸಾಮಾನ್ಯ ಚರ್ಚೆ ಸೆಪ್ಟೆಂಬರ್ 23ರಿಂದ 29ರವರೆಗೆ ನಡೆಯಲಿದೆ. ಪರಂಪರೆ ಪ್ರಕಾರ ಮೊದಲ ಭಾಷಣಕಾರರಾಗಿ ಬ್ರೆಜಿಲ್ ನಾಯಕರು ಮತ್ತು ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದಾರೆ. ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಮಾತನಾಡಲಿದ್ದಾರೆ.
ಭಾರತವನ್ನು ಪ್ರತಿನಿಧಿಸಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೆಪ್ಟೆಂಬರ್ 27ರಂದು ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಮೊದಲ ಪಟ್ಟಿಯ ಪ್ರಕಾರ, ಮೋದಿ ಸೆಪ್ಟೆಂಬರ್ 26ರಂದು ಮಾತನಾಡಬೇಕಾಗಿತ್ತು. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಾಯಕರೂ ಸೆಪ್ಟೆಂಬರ್ 26ರಂದು ತಮ್ಮ ಭಾಷಣ ನೀಡಲಿದ್ದಾರೆ.
UNGA ಭಾಷಣಕಾರರ ಪಟ್ಟಿ ತಾತ್ಕಾಲಿಕವಾಗಿದ್ದು, ಸಭೆ ಆರಂಭಕ್ಕೂ ಮುನ್ನ ಬದಲಾವಣೆ ಸಾಧ್ಯತೆ ಇದ್ದು, ಅಗತ್ಯವಿದ್ದರೆ ಪಟ್ಟಿಯನ್ನು ಪರಿಷ್ಕರಿಸಲಾಗುವುದು.
ಈ ಅಧಿವೇಶನವು 1995ರ ಬೀಜಿಂಗ್ ಸಭೆಯ ಯಶಸ್ಸಿನ ನಂತರದ ಪ್ರಗತಿಯನ್ನು ತೋರಿಸುತ್ತದೆ. ಈ ವರ್ಷ ಜಾಗತಿಕ ಲಿಂಗ ಸಮಾನತೆ, ಕೈಗೊಂಡ ಕ್ರಮಗಳು ಮತ್ತು ಸವಾಲುಗಳ ಮೇಲೆ ಗಮನ ಹರಿಸಲಾಗುತ್ತದೆ. ಜೊತೆಗೆ ಇಸ್ರೇಲ್-ಹಮಾಸ್ ಯುದ್ಧ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಅಧಿವೇಶನ ನಡೆಯುತ್ತಿದೆ.







