New Delhi: ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ 12,300 ಕೋಟಿ ರೂ. ಮೌಲ್ಯದ ನಾಲ್ಕು ಪ್ರಮುಖ ರೈಲ್ವೆ ಯೋಜನೆಗಳಿಗೆ (Rrailway projects) ಅನುಮೋದನೆ ದೊರೆತಿದೆ. ಈ ಯೋಜನೆಗಳು ಕರ್ನಾಟಕ, ತೆಲಂಗಾಣ, ಬಿಹಾರ, ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳಿಗೆ ಅನುಕೂಲವಾಗಲಿವೆ.
ಈ ಯೋಜನೆಗಳಲ್ಲಿ ಗುಜರಾತ್‌ನ ಕಚ್ ಪ್ರದೇಶದಲ್ಲಿ ಹೊಸ ರೈಲು ಮಾರ್ಗ ಮತ್ತು ಉಳಿದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಹಳಿಗಳಿಗೆ ಹೆಚ್ಚುವರಿ ಟ್ರ್ಯಾಕ್‌ಗಳನ್ನು ಸೇರಿಸುವ ಯೋಜನೆಗಳು ಸೇರಿವೆ. ಇದರ ಪರಿಣಾಮವಾಗಿ ರಾಜ್ಯಗಳ ನಡುವೆ ಸಂಪರ್ಕ ಸುಧಾರಣೆ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯ, ಸರಕು ಸಾಗಣೆಗೆ ವೇಗ ಹಾಗೂ ಪ್ರವಾಸೋದ್ಯಮದ ಉತ್ತೇಜನ ಸಾಧ್ಯವಾಗಲಿದೆ. ಜೊತೆಗೆ ಲಾಜಿಸ್ಟಿಕ್ ವೆಚ್ಚ ಕಡಿಮೆಯಾಗುವುದು, ಇಂಧನದ ಮೇಲಿನ ಅವಲಂಬನೆ ತಗ್ಗುವುದು ಹಾಗೂ ಪರಿಸರ ಸ್ನೇಹಿ ರೈಲು ಸಂಚಾರ ಸಾಧ್ಯವಾಗಲಿದೆ.
ಮುಖ್ಯ ಯೋಜನೆಗಳೆಂದರೆ
ಗುಜರಾತ್: 2,526 ಕೋಟಿ ರೂ. ವೆಚ್ಚದಲ್ಲಿ ದೇಶಲ್ಪರ್–ಹಾಜಿಪಿರ್–ಲೂನಾ ಹಾಗೂ ವಾಯೋರ್–ಲಖ್ಪತ್ ನಡುವೆ 145 ಕಿ.ಮೀ. ಉದ್ದದ ಹೊಸ ರೈಲು ಮಾರ್ಗ. ಇದು 13 ನಿಲ್ದಾಣಗಳನ್ನು ಹೊಂದಿದ್ದು, ಸುಮಾರು 16 ಲಕ್ಷ ಜನರಿಗೆ ಪ್ರಯೋಜನವಾಗಲಿದೆ.
ಕರ್ನಾಟಕ–ತೆಲಂಗಾಣ: ಸಿಕಂದರಾಬಾದ್ (ಸನತ್ನಗರ)–ವಾಡಿ ನಡುವೆ 173 ಕಿ.ಮೀ. ಉದ್ದದ 3ನೇ ಮತ್ತು 4ನೇ ಹಳಿಗಳ ಯೋಜನೆ. 5,012 ಕೋಟಿ ರೂ. ವೆಚ್ಚದಲ್ಲಿ 47 ಲಕ್ಷ ಜನರಿಗೆ ಸಂಪರ್ಕ ಸುಧಾರಣೆ ದೊರೆಯಲಿದೆ.
ಬಿಹಾರ: ಭಾಗಲ್ಪುರ್–ಜಮಾಲ್ಪುರ್ ನಡುವೆ 53 ಕಿ.ಮೀ. ಉದ್ದದ ಮೂರನೇ ಮಾರ್ಗ. ಇದು 1,156 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಅಸ್ಸಾಂ: ಫರ್ಕೇಟಿಂಗ್–ನ್ಯೂ ಟಿನ್ಸುಕಿಯಾ ನಡುವಿನ 194 ಕಿ.ಮೀ. ಹಳಿಯನ್ನು ದ್ವಿಗುಣಗೊಳಿಸುವ ಯೋಜನೆ. ಇದರ ವೆಚ್ಚ 3,634 ಕೋಟಿ ರೂ. ಆಗಿದೆ.
ಒಟ್ಟಾರೆ, ಈ ಯೋಜನೆಗಳ ಮೂಲಕ ರೈಲ್ವೆ ಜಾಲವು 565 ಕಿ.ಮೀ. ವಿಸ್ತರಿಸಲಿದೆ. ಜೊತೆಗೆ ಸರಕು ಸಾಗಣೆ ಸಾಮರ್ಥ್ಯವು ಹೆಚ್ಚಾಗಿ, ಕಲ್ಲಿದ್ದಲು, ಸಿಮೆಂಟ್, ಉಕ್ಕು, ಕೃಷಿ ಉತ್ಪನ್ನ, ಆಟೋಮೊಬೈಲ್ ಮತ್ತು ಇತರ ವಸ್ತುಗಳ ಸಾಗಣೆ ಸುಗಮವಾಗಲಿದೆ.