ವೆನೆಜುವೆಲಾದಿಂದ ಮಾದಕವಸ್ತು ಸಾಗಿಸುತ್ತಿದ್ದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 11 ಮಂದಿ ಮಾದಕವಸ್ತು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದ ಸೇನೆ, ಅಂತಾರಾಷ್ಟ್ರೀಯ ಸಮುದ್ರ ಗಡಿಯಲ್ಲಿ ಸಾಗುತ್ತಿದ್ದ “ಟ್ರೆನ್ ಡಿ ಅರಾಗುವಾ” ಗ್ಯಾಂಗ್ ಸದಸ್ಯರ ಹಡಗಿನ ಮೇಲೆ ಗುಂಡು ಹಾರಿಸಿದೆ. ಹಡಗು ಅಮೆರಿಕಕ್ಕೆ ಅಕ್ರಮ ಮಾದಕವಸ್ತುಗಳನ್ನು ಸಾಗಿಸುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಪಡೆಗಳಿಗೆ ಯಾವುದೇ ನಷ್ಟವಾಗಿಲ್ಲ.
“ಯಾರಾದರೂ ಅಮೆರಿಕಕ್ಕೆ ಮಾದಕವಸ್ತುಗಳನ್ನು ತರಲು ಯತ್ನಿಸಿದರೆ ಇದು ಅವರಿಗೆ ಎಚ್ಚರಿಕೆ. ಹುಷಾರಾಗಿರಿ,” ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕದ ದಾಳಿಗೆ ಪ್ರತೀಕಾರ ಮಾಡಲಾಗುವುದು ಎಂದು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಎಚ್ಚರಿಸಿದ್ದಾರೆ. ಅವರ ಮೇಲೆ ಅಮೆರಿಕ ಈಗಾಗಲೇ ಮಾದಕವಸ್ತು ಕಳ್ಳಸಾಗಣೆ ಆರೋಪ ಮಾಡಿದ್ದು, ಬಂಧನಕ್ಕೆ ಕಾರಣವಾಗುವ ಮಾಹಿತಿಗೆ 50 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
ಕಳೆದ ಕೆಲವು ತಿಂಗಳಲ್ಲಿ ದಕ್ಷಿಣ ಕೆರಿಬಿಯನ್ನಲ್ಲಿ ಅಮೆರಿಕ ತನ್ನ ನೌಕಾಪಡೆಯನ್ನು ಬಲಪಡಿಸಿದೆ. ಸಾವಿರಾರು ಮೆರೈನ್ಗಳು ಮತ್ತು ನಾವಿಕರನ್ನು ನಿಯೋಜಿಸಿದೆ. “ಟ್ರೆನ್ ಡಿ ಅರಾಗುವಾ” ಮತ್ತು “ಕಾರ್ಟೆಲ್ ಆಫ್ ದಿ ಸನ್ಸ್” ಮುಂತಾದ ಗುಂಪುಗಳನ್ನು ಅಮೆರಿಕ ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿದೆ.