
Bengaluru: ಅಮೆರಿಕವು ಪ್ರಾರಂಭಿಸಿರುವ ಸುಂಕ ಸಮರ, (US tariff war) ಜಾಗತಿಕ ಹೂಡಿಕೆದಾರರ ಒಡಂಬಡಿಕೆಗಳು ಮತ್ತು ಇತ್ತೀಚಿನ ಜಾಗತಿಕ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (Minister M.B. Patil) ಅವರು ಖನಿಜ ಭವನದಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಅಮೆರಿಕವು ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಉತ್ಪನ್ನಗಳ ಮೇಲೆ ಭಾರಿ ಸುಂಕವನ್ನು ವಿಧಿಸಲು ತೀರ್ಮಾನಿಸಿದೆ. ಇದರಿಂದ ಕರ್ನಾಟಕದ ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್, ಫಾರ್ಮಾಸ್ಯೂಟಿಕಲ್ಸ್, ರಕ್ಷಣಾ ಉತ್ಪನ್ನಗಳು ಮತ್ತು ಇತರ ರಫ್ತು ವಹಿವಾಟುಗಳನ್ನು ಹೇಗೆ ಪ್ರಭಾವಿತ ಮಾಡುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಅಮೆರಿಕ ಈ ಕ್ರಮವನ್ನು ಮೂರು ತಿಂಗಳ ಕಾಲ ಮುಂದೂಡಿದೆ.
ಈ ಸ್ಥಿತಿಯನ್ನು ರಾಜ್ಯವು ಸದವಕಾಶವಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು. ಪ್ರತಿ ಸುಂಕದ ಹೊಡೆತಕ್ಕೆ ಹಲವು ದೇಶಗಳು ಮತ್ತು ಉದ್ದಿಮೆಗಳು ನಲುಗಬಹುದು, ಹೀಗಾಗಿ ರಾಜ್ಯವು ತೊಂದರೆಯಿಲ್ಲದೆ ಹೂಡಿಕೆ ಒಪ್ಪಂದಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು.
ಕೇಂದ್ರ ಸರಕಾರವು ಸುಂಕ ಸಮರವನ್ನು ಹೇಗೆ ಎದುರಿಸಬೇಕೆಂದು ಯೋಚಿಸುತ್ತಿದೆ. ರಾಜ್ಯವು ಈ ನಿಲುವಿಗೆ ಸಿದ್ಧವಾಗಬೇಕು ಎಂದು ಸಚಿವರು ಹೇಳಿದರು. ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ನ ಮೈಕೇಲ್ ಅವರು ವರ್ಚುಯಲ್ ಪ್ರಕಾರ ಸಭೆಗೆ ಹಾಜರಾಗಿ ಅಮೆರಿಕದ ಸುಂಕ ನೀತಿಯ ಪರಿಣಾಮಗಳನ್ನು ವಿವರಿಸಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.