Washington: ರಷ್ಯಾದಿಂದ (Russia) ಭಾರತ ತೈಲ ಖರೀದಿಸುತ್ತಿರುವುದು, ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಹಣಕಾಸು ನೆರವಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಈ ಖರೀದಿ ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧದಲ್ಲಿ ಅಲ್ಪ ಮಟ್ಟದ ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾರ್ಕೊ ರೂಬಿಯೊ ಅವರು ಫಾಕ್ಸ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, “ಭಾರತ ರಷ್ಯಾದಿಂದ ಅಗ್ಗದ ದರದಲ್ಲಿ ತೈಲ, ಅನಿಲ, ಕಲ್ಲಿದ್ದಲು ಖರೀದಿಸುತ್ತಿದೆ. ಇದು ಭಾರತದ ಅಗತ್ಯತೆ ಹಾಗೂ ಆರ್ಥಿಕತೆ ಆಧಾರಿತ. ಆದರೆ ಇದರಿಂದ ರಷ್ಯಾಗೆ ಯುದ್ಧ ಮುಂದುವರಿಸಲು ಹಣ ಸಿಗುತ್ತಿದೆ” ಎಂದರು.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಬರುತ್ತಿರುವ ಎಲ್ಲ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ ಬಳಿಕ ಈ ಹೇಳಿಕೆ ಬಂದಿದೆ. ಇದರಿಂದಾಗಿ ಭಾರತ-ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಮತ್ತಷ್ಟು ಸಂಕೀರ್ಣವಾಗಬಹುದು ಎಂಬ ಚಿಂತೆ ವ್ಯಕ್ತವಾಗಿದೆ.
ಮಾರ್ಕೊ ರೂಬಿಯೊ ಅವರ ಹೇಳಿಕೆಯಲ್ಲಿ, “ಭಾರತ ನಮ್ಮ ಮಿತ್ರ ದೇಶ, ಆದರೆ ಎಲ್ಲಾ ವಿಷಯಗಳಲ್ಲಿ ಶೇಕಡಾ 100ರಷ್ಟು ಒಪ್ಪಿಗೆಯಿರುವುದು ಸಾಧ್ಯವಿಲ್ಲ. ಇಂಧನ ಖರೀದಿ ವಿಷಯದಲ್ಲಿ ಭಾರತ ತನ್ನ ಆಯ್ಕೆಯನ್ನು ಮಾಡಿದೆ. ಆದರೆ, ಅಮೆರಿಕದ ದೃಷ್ಟಿಯಿಂದ ಇದು ಯುದ್ಧಕ್ಕೆ ನೆರವಾಗಿದೆ” ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಭಾರತದ ಕೇಂದ್ರ ಸರ್ಕಾರ, “ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಸುಂಕದ ಪರಿಣಾಮಗಳನ್ನೂ ಪರಿಶೀಲಿಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದೆ.
ರಷ್ಯಾದಿಂದ ಭಾರತ ಇಂಧನ ಖರೀದಿಸುತ್ತಿರುವುದು ಅಮೆರಿಕಕ್ಕೆ ಖುಷಿಯ ವಿಷಯವಲ್ಲ. ಇದು ಉಕ್ರೇನ್-ರಷ್ಯಾ ಯುದ್ಧದ ನಡುವೆ ಭಾರತ-ಅಮೆರಿಕ ಸಂಬಂಧದಲ್ಲಿ ಒತ್ತಡ ಉಂಟುಮಾಡುತ್ತಿದೆ.