ಉತ್ತರಾಖಂಡದ ಧರಾಲಿ ಗ್ರಾಮದಲ್ಲಿ ಆಗಸ್ಟ್ 5ರಂದು ಸಂಭವಿಸಿದ ಭೀಕರ ಪ್ರವಾಹದಲ್ಲಿ (flood disaster) ಎಂಟು ಸೈನಿಕರನ್ನು ಸೇರಿ ಕನಿಷ್ಠ 49 ಮಂದಿ ಕಾಣೆಯಾಗಿದ್ದಾರೆ. ಧರಾಲಿಯಿಂದ ಮೂರು ಕಿಲೋಮೀಟರ್ ದೂರದ ಹರ್ಸಿಲ್ ಸೇನಾ ಶಿಬಿರದ ಸೈನಿಕರೂ ನಾಪತ್ತೆಯಾಗಿದ್ದಾರೆ. ಪರ್ವತದಿಂದ ಬಂದ ಭಾರೀ ಬಂಡೆಗಳ ದಾಳಿಯಿಂದ ಅನೇಕರು ಸಾವಿಗೀಡಾದ ಶಂಕೆಯಿದೆ.
ರಕ್ಷಣಾ ತಂಡಗಳು ಹಗ್ಗಗಳ ಸಹಾಯದಿಂದ ಶಿಬಿರಕ್ಕೆ ಸರಕುಗಳನ್ನು ಸಾಗಿಸುತ್ತಿವೆ. ಇದುವರೆಗೆ ನಾಲ್ವರು ಮೃತಪಟ್ಟಿದ್ದು, 357 ಜನರನ್ನು ರಕ್ಷಿಸಲಾಗಿದೆ. 119 ಜನರನ್ನು ವಿಮಾನದ ಮೂಲಕ ಡೆಹ್ರಾಡೂನ್‌ಗೆ ಕಳುಹಿಸಲಾಗಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಐಟಿಬಿಪಿ, ಸೇನಾ ವೈದ್ಯರು ಹಾಗೂ ಶ್ವಾನ ದಳಗಳು ಶೋಧ ಕಾರ್ಯ ನಡೆಸುತ್ತಿವೆ.
ಪ್ರವಾಹದಲ್ಲಿ ಲಿಮ್ಚಿಗಡ್ ಸೇತುವೆ ಕೊಚ್ಚಿ ಹೋಗಿದ್ದು, ಸೇನಾ ಇಂಜಿನಿಯರ್ ಗಳು ಮತ್ತು ಬಿಆರ್ಒ 90 ಅಡಿ ಉದ್ದದ ಬೈಲಿ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ಗಂಗೋತ್ರಿ–ಉತ್ತರಕಾಶಿ ನಡುವೆ ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಗಂಗೋತ್ರಿ ಶಾಸಕ ಸುರೇಶ್ ಚೌಹಾಣ್ ಅವರು, “ಸೇನೆ, ಐಟಿಬಿಪಿ, ಎಸ್ಡಿಆರ್ಎಫ್ ಸೇರಿದಂತೆ ಹಲವು ಘಟಕಗಳು ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ” ಎಂದು ತಿಳಿಸಿದ್ದಾರೆ.