ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Sleeper Train) ರೈಲುಗಳು ದೇಶಾದ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡಲು ಸೌಲಭ್ಯವಿಲ್ಲ. ಇದನ್ನು ಮನಗಂಡು, ಕೆಲವೇ ದಿನಗಳಲ್ಲಿ ‘ವಂದೇ ಭಾರತ್ ಸ್ಲೀಪರ್’ ರೈಲು ಪ್ರಾರಂಭವಾಗಲಿದೆ.
ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಪ್ರಕಾರ, ‘ಕರ್ನಾಟಕದ ಮೊದಲ ವಂದೇ ಸ್ಲೀಪರ್ ರೈಲು’ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. ಇದು ಬೆಳಗಾವಿ ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದ್ದು, ಕಿತ್ತೂರು ಮೂಲಕ ಧಾರವಾಡಕ್ಕೂ ಸಂಪರ್ಕ ಕಲ್ಪಿಸುತ್ತದೆ.
ಅಧುನಿಕತೆ ಮತ್ತು ಐಷಾರಾಮಿ ಸೌಲಭ್ಯಗಳು, ನೂತನ ಸ್ಲೀಪರ್ ರೈಲು ಪ್ರಯಾಣಿಕರಿಗೆ ಉನ್ನತ ಮಟ್ಟದ ಅನುಭವ ನೀಡಲು ವಿನ್ಯಾಸಗೊಳಿಸಲಾಗಿದೆ.
ಈ ನೂತನ ವಂದೇ ಭಾರತ್ ಸ್ಲೀಪರ್ ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಕಾರ್ಯಾಚರಣೆ ನಡೆಸಲಿದೆ. 16 ಕೋಚ್‌ಗಳನ್ನು ಹೊಂದಿದ್ದು, ರಾತ್ರಿಯ ವೇಳೆಯಲ್ಲಿ ಪ್ರಯಾಣಿಕರು ಆರಾಮದಾಯಕವಾಗಿ ನಿದ್ದೆ ಮಾಡುತ್ತಾ ಪ್ರಯಾಣಿಸಬಹುದು. ಹೊಸ ವಂದೇ ಭಾರತ್ ಸ್ಲೀಪರ್ 800 ರಿಂದ 1,200 ಕಿಲೋಮೀಟರ್‌ವರೆಗಿನ ಮಾರ್ಗದಲ್ಲಿ ಓಡಾಟ ನಡೆಸಲಿದೆ.
ಈ ವರ್ಷ ಸೆಪ್ಟೆಂಬರ್ 16 ರಂದು ದೇಶದ ಮೊದಲ ‘ವಂದೇ ಸ್ಲೀಪರ್’ ರೈಲನ್ನು ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಘಟಕದಲ್ಲಿ ಅನಾವರಣಗೊಳಿಸಲಾಗಿತ್ತು. ಮುಂದಿನ ವರ್ಷದಿಂದ ಮತ್ತಷ್ಟು ಮಾರ್ಗಗಳಲ್ಲಿ ಸ್ಲೀಪರ್ ರೈಲುಗಳು ಸಂಚರಿಸಲಿವೆ.
ಈ ಯೋಜನೆ ದಿವಂಗತ ಮಾಜಿ ಸಚಿವ ಸುರೇಶ್ ಅಂಗಡಿ ಅವರ ಕನಸನ್ನು ಸಾಕಾರಗೊಳಿಸುತ್ತಿದ್ದು, ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದೆ.