ಹಿರಿಯ ಕನ್ನಡ ನಟಿ ಬಿ. ಸರೋಜಾ ದೇವಿ (B. Saroja Devi) ಇಂದು (ಜುಲೈ 14) ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೆಲ ಕಾಲದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಚಿತ್ರರಂಗದಲ್ಲಿ ಸುಮಾರು 65 ವರ್ಷಗಳ ಕಾಲ ಸಕ್ರಿಯವಾಗಿದ್ದರು.
2019 ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರವೇ ಅವರ ಕೊನೆಯ ಅಭಿನಯ. ಅದರಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸರೋಜಾ ದೇವಿ ಅವರು 1967 ರಲ್ಲಿ ಹರ್ಷ ಎಂಬುವರನ್ನು ವಿವಾಹವಾಗಿದ್ದರು. 1986 ರಲ್ಲಿ ಪತಿ ಹರ್ಷ ನಿಧನರಾದರು. ಅವರ ಅಂತ್ಯಕ್ರಿಯೆ ಪತಿಯ ಸಮಾಧಿಯ ಪಕ್ಕದಲ್ಲಿಯೇ ಬೆಂಗಳೂರಿನ ಕೊಡಿಗೆಹಳ್ಳಿಯ ತೋಟದಲ್ಲಿ ನಡೆಯಲಿದೆ.
ಸರೋಜಾ ದೇವಿ ಜನನ 1938ರ ಜನವರಿ 7ರಂದು ಬೆಂಗಳೂರಿನಲ್ಲಿ ನಡೆಯಿತು. ತಂದೆ ಬೈರಪ್ಪ ಪೊಲೀಸ್ ಅಧಿಕಾರಿ ಹಾಗೂ ತಾಯಿ ರುದ್ರಮ್ಮಾ ಗೃಹಿಣಿಯಾಗಿದ್ದರು. ಬಾಲ್ಯದಲ್ಲಿಯೇ ತಂದೆಯ ಪ್ರೋತ್ಸಾಹದಿಂದ ನೃತ್ಯ ಕಲಿತರು ಮತ್ತು ಚಿತ್ರರಂಗದಲ್ಲಿ ಪ್ರವೇಶಿಸಿದರು.
ಅವರು 17ನೇ ವಯಸ್ಸಿನಲ್ಲಿ ‘ಮಹಾಕವಿ ಕಾಳಿದಾಸ’ (1955) ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದರು. ನಂತರ ಅವರೇನು ಆಫರ್‌ಗಳನ್ನು ಹುಡುಕಬೇಕಾಗಲಿಲ್ಲ – ಸಿನಿಮಾಗಳು ಅವರನ್ನು ಹುಡುಕಿ ಬಂದವು. ಅವರು ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಯಶಸ್ವಿಯಾಗಿ ಅಭಿನಯಿಸಿದರು. ಒಟ್ಟಾರೆ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಡಾ. ರಾಜ್‌ಕುಮಾರ್, ಕಲ್ಯಾಣ್ ಕುಮಾರ್ ಮತ್ತು ಇತರ ಗಣ್ಯ ನಟರ ಜೊತೆಗೆ ಕೆಲಸ ಮಾಡಿದ್ದಾರೆ. ಅವರು ನಟಿಸಿರುವ ಪ್ರಮುಖ ಕನ್ನಡ ಸಿನಿಮಾಗಳಲ್ಲಿ ‘ಅಮರಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ‘ಬಬ್ರುವಾಹನ’, ‘ಭಾಗ್ಯವಂತರು’ ಸೇರಿವೆ. ತಮಿಳು, ತೆಲುಗು, ಹಿಂದಿ ಭಾಷೆಯಲ್ಲೂ ಹಲವು ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ತನ್ನದೇ ಆದ ಗುರುತು ಹೊಂದಿದ್ದ ಸರೋಜಾ ದೇವಿ ನಿಧನದಿಂದ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ದುಃಖದ ಮೋಡ ಮೂಡಿದೆ.