Bengaluru : ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ಆವರಣದಲ್ಲಿರುವ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (Government Dental College and Research Institute) ಲೇಸರ್ ಸಂಶೋಧನಾ ಕೇಂದ್ರ ಹಾಗೂ ಅತ್ಯಾಧುನಿಕ ಮಾಲೆಕ್ಯುಲರ್ ಬಯಾಲಜಿ ಪ್ರಯೋಗಾಲಯದ (Molecular Biology Lab) ಉದ್ಘಾಟನೆ ಮತ್ತು ಸೌಂದರ್ಯ ದಂತ ವಿಜ್ಞಾನ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಯ ಶಂಕುಸ್ಥಾಪನೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೋಮವಾರ ನೆರೆವೇರಿಸಿದರು. ನಂತರ ಸಚಿವರು ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಬಾಯಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು ಹಾಗೂ ಹಲ್ಲಿನ ಚಿಕಿತ್ಸೆ ಒದಗಿಸಲು ಸಜ್ಜುಗೊಳಿಸಿದ ಸುಸಜ್ಜಿತ ದಂತ ಚಿಕಿತ್ಸೆ ಸಂಚಾರ ಘಟಕವನ್ನು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಪುರಾಣಿಕ್ ” ಗ್ರಾಮೀಣ ಪ್ರದೇಶಗಳಿಗೆ ತೆರಳಿ ಹಲ್ಲಿನ ಹುಳುಕು, ವಸಡಿನ ತೊಂದರೆಗಳ ತಪಾಸಣೆ ನಡೆಸಲು ಮತ್ತು ಚಿಕಿತ್ಸೆ ನೀಡಲು, ಬಾಯಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಹಾಗೂ ಈ ರೋಗ ಲಕ್ಷಣ ಹೊಂದಿದವರಿಗೆ ಕೌನ್ಸೆಲಿಂಗ್ ನೀಡಲು ಈ ವಾಹನ ಬಳಸುತ್ತೇವೆ” ಎಂದು ಹೇಳಿದರು.
ನಂತರ ಕಾಲೇಜಿನ ಪ್ರಥಮ ಪ್ರಾಂಶುಪಾಲರು, ಕರ್ನಾಟಕದ ದಂತ ವೈದ್ಯಕೀಯ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾದ ಡಾ.ಎಸ್.ರಾಮಚಂದ್ರ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.