Vijayapura, Devanahalli : ವಿಜಯಪುರ ಪಟ್ಟಣ ಹಾಗೂ ಸುತ್ತಮುತ್ತಲ ಹೋಬಳಿಗಳಲ್ಲಿ ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ನಗರೇಶ್ವರ, ರುದ್ರದೇವರು, ಓಂಕಾರೇಶ್ವರ, ಸೋಮೇಶ್ವರ, ಗಂಗಾತಾಯಿ, ಎಲ್ಲಮ್ಮ, ಕೊಮ್ಮಸಂದ್ರದ ಚಂದ್ರಮೌಳೇಶ್ವರ, ಗಡ್ಡದನಾಯಕನಹಳ್ಳಿಯ ದುರ್ಗಾಮಹೇಶ್ವರಿ, ದುರ್ಗಾತಾಯಿ, ಸತ್ಯಮ್ಮ, ಸಪ್ಪಲಮ್ಮ, ಹೊಲೇರಹಳ್ಳಿಯ ಮುನೇಶ್ವರ, ಬಸವೇಶ್ವರ, ಶನೇಶ್ವರ, ಸೌಮ್ಯ ಚನ್ನಕೇಶವ, ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಬಸವ ಕಲ್ಯಾಣ ಮಠದ ಬಳಿಯ ಸಂಗಮ ಬಸವೇಶ್ವರ ದೇವಾಲಯದಲ್ಲಿ ಗಂಧದ ಅಲಂಕಾರ ಹಾಗೂ ಹರಿಹರ ಸಂಗಮ ಕ್ಷೇತ್ರದ ನಗರೇಶ್ವರ ದೇವಾಲಯದಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಶೈಲಿಯ ಅಲಂಕಾರ ಭಕ್ತರ ಗಮನ ಸೆಳೆಯಿತು.
ಸಂತೆ ಮೈದಾನದ ಚನ್ನಬಸವಣ್ಣ ದೇವಾಲಯ, ಬಯಲು ಬಸವೇಶ್ವರ ದೇವಾಲಯ ಮತ್ತು ಸರೋವರ ಗಣಪತಿ ದೇವಾಲಯಗಳಲ್ಲಿ ಗೋಧೂಳಿ ಲಗ್ನದ ವೇಳೆ ಶಿವಸ್ತೋತ್ರ, ಶಿವಸಹಸ್ರನಾಮ, ಶಿವಾನಂದ ಲಹರಿ, ಭಕ್ತಸುಧೆ ಮತ್ತು ಶಿವಸ್ತುತಿ ಪಾರಾಯಣದ ಧ್ವನಿಗಳು ಹರಡಿದವು.
ಒಂಕಾರೇಶ್ವರ ದೇವಾಲಯದಲ್ಲಿ 101 ಶಿವಲಿಂಗಗಳಿಗೆ ಬಿಲ್ವಪತ್ರೆ, ಹೂವಿನಿಂದ ಪೂಜೆ ಸಲ್ಲಿಸುವ ಮೂಲಕ ಭಕ್ತರು ತಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸಿದರು.