Vijayapura, Devanahalli : ಕನಕದಾಸರು ಸಮಾಜದಲ್ಲಿ ಅಸಮತೋಲನವನ್ನು ಮೀರಿ ನಿಲ್ಲಲು ಕೀರ್ತನೆಗಳನ್ನು ಉಪಯೋಗಿಸಿ ಸಮಾನತೆಯ ಮಹತ್ವವನ್ನು ಬೋಧಿಸಿದ ಮಹಾನ್ ವ್ಯಕ್ತಿ ಎಂದು ಕೈವಾರ ಕ್ಷೇತ್ರದ ನಾಧಸುಧಾ ವೇದಿಕೆ ಸಂಚಾಲಕ ವಿದ್ವಾನ್ ವಾನ ರಾಸಿ ಬಾಲಕೃಷ್ಣ ಭಾಗವತರ್ ಅಭಿಪ್ರಾಯಪಟ್ಟರು.
ಶ್ರೀಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ ವತಿಯಿಂದ ಸೌಮ್ಯ ಚನ್ನಕೇಶವಸ್ವಾಮಿ ದೇವಾಲಯದಲ್ಲಿ (Shri Sowmya Chennakeshava Swami Temple) ಶನಿವಾರ ಆಯೋಜಿಸಲಾದ ಸತ್ಸಂಗದಲ್ಲಿ ಅವರು ಕನಕದಾಸರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ಕನಕದಾಸರು ಸಮಾಜದಲ್ಲಿ ಉನ್ನತ-ಕೀಳು ವರ್ಗಗಳ ಅಸಮತೋಲನವನ್ನು ತೃಣೀಕರಿಸಿ, ಕೀರ್ತನೆಗಳ ಮೂಲಕ ಸಮಾನತೆಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಕಟ್ಟುಪಾಡುಗಳಿಂದ ಮುಕ್ತವಾಗಲು ಅವರಿಗೆ ಕೀರ್ತನೆಗಳು ಶಕ್ತಿ ತುಂಬಿದವು ಎಂದರು.
ಸತ್ಸಂಗದ ಅಧ್ಯಕ್ಷ ಜೆ.ಎಸ್. ರಾಮಚಂದ್ರಪ್ಪ ಮಾತನಾಡಿ, ಕನಕದಾಸರು ಕೇವಲ ಒಂದು ಜಾತಿಗೆ ಮಾತ್ರ ಸೀಮಿತವಾದವರು ಅಲ್ಲ. ಇಡೀ ಮನುಕುಲಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಮಾನವೀಯತೆಯ ಮಹತ್ವವನ್ನು ಸಾರಿದರು ಎಂದು ಹೇಳಿದರು.
ಸಮಾರಂಭದಲ್ಲಿ ಪ್ರಧಾನ ಅರ್ಚಕ ಮುರಳೀಧರ ಭಟ್ಟಾಚಾರ್ಯ, “ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕದ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆದಿದ್ದಾರೆ,” ಎಂದು ಶ್ಲಾಘಿಸಿದರು.
ಸಂಗೀತ ನಿರ್ದೇಶಕ ಎಂ.ವಿ. ನಾಯ್ಡು ನೇತೃತ್ವದ ತಂಡದಿಂದ ಸಂಭ್ರಮಕರ ಸಂಗೀತ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಭಗವದ್ಗೀತೆ ಪುಸ್ತಕಗಳು ಮತ್ತು ಮುತ್ತೈದೆಯರಿಗೆ ಸೀರೆಗಳನ್ನು ವಿತರಣೆ ಮಾಡಲಾಯಿತು.
ಉಗನವಾಡಿಯ ಡೇರಿ ಅಧ್ಯಕ್ಷ ಮಂಜುನಾಥ್, ಜೆ. ವೆಂಕಟಾಪುರದ ಕಲ್ಲೇಶ್ವರ ದೇವಾಲಯ ಕಮಿಟಿಯ ಅಧ್ಯಕ್ಷ ಆರ್. ಜಗದೀಶ್ ಭೋಜರಾಜು, ಸತ್ಸಂಗದ ಸಂಚಾಲಕ ವಿ.ಎನ್. ವೆಂಕಟೇಶ್, ಆರ್. ಮುನಿರಾಜು, ಗೋವಿಂದರಾಜು ಮತ್ತು ವಿಶ್ವನಾಥ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.