Vijayapura, Devanahalli : ವಿಜಯಪುರ ಪಟ್ಟಣದ ಎಲ್ಲಾ 23 ವಾರ್ಡ್‌ಗಳಲ್ಲಿ ಕಸ ಪ್ರತ್ಯೇಕಿಸಲು ಕಡ್ಡಾಯ ಕ್ರಮ ಜಾರಿಯಾಗಿದೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಪುರಸಭೆಯ ಕಸ ಸಂಗ್ರಹ ವಾಹನಗಳಿಗೆ ನೀಡದೇ ಇದ್ದರೆ ದಂಡ ವಿಧಿಸಲಾಗುವುದು ಎಂದು ಪುರಸಭೆ ಎಚ್ಚರಿಸಿದೆ.
ಪುರಸಭೆ ಮುಖ್ಯಾಧಿಕಾರಿ ಜಿ.ಆರ್. ಸಂತೋಷ್ ತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಶೀಲಿಸಿದ ನಂತರ, ಕಸ ಪ್ರತ್ಯೇಕಿಕರಣ ಕಡ್ಡಾಯವೆಂದು ಹೇಳಿದರು. ಕಸ ಸಂಗ್ರಹಣೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಲು ಸಾರ್ವಜನಿಕರಿಂದ ಸಹಕಾರ ಅಗತ್ಯವಿದೆ ಎಂದರು.
ಪುರಸಭೆ ಪ್ರಾಯೋಗಿಕವಾಗಿ ಗೊಬ್ಬರ ತಯಾರಿಕೆ ಘಟಕಗಳನ್ನು ಆರಂಭಿಸಿದ್ದು, ಕಸದಿಂದ ಉತ್ಪಾದನೆಯಾದ ಗೊಬ್ಬರವನ್ನು ರೈತರು ತಮ್ಮ ತೋಟಗಳಿಗೆ ಬಳಸಲು ಅನುಕೂಲವಾಗುತ್ತದೆ. ಆದರೆ, ಕಸವನ್ನು ಪ್ರತ್ಯೇಕಿಸದಿದ್ದರೆ ಗೊಬ್ಬರ ತಯಾರಿಕೆಯಲ್ಲಿ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಸ್ವಚ್ಛತೆ ಮತ್ತು ವೈಜ್ಞಾನಿಕ ಕಸ ವಿಲೇವಾರಿ ಕಾರ್ಯಗಳಿಗೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅವಶ್ಯಕ ಎಂದು ಅವರು ಹೇಳಿದರು.