Vijayapura, Beengaluru Rural : ವಿಜಯಪುರ ಪಟ್ಟಣದ ನವಗ್ರಹ ದೇವಾಲಯದ ಬಳಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (SKDRDP) ನಿಂದ ತೆರೆದಿರುವ ಸಾಮಾನ್ಯ ಸೇವಾ ಕೇಂದ್ರವನ್ನು (CSC) ಪುರಸಭೆ ಸದಸ್ಯ ಎಂ. ಸತೀಶ್ ಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತಾನಾಡಿದ ಎಂ. ಸತೀಶ್ ಕುಮಾರ್ ” ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೈಗೆತ್ತಿಕೊಂಡಿರುವ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗಿದ್ದು ಯೋಜನೆಯಿಂದ ಜಾರಿಗೊಳಿಸಲಾಗುತ್ತಿರುವ ಎಲ್ಲಾ ಜನಪರ ಯೋಜನೆಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು. SKDRDP ಕೃಷಿ, ಧಾರ್ಮಿಕ ಕ್ಷೇತ್ರ, ಪಿಂಚಣಿ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡುವ ಮೂಲಕ ಸಮಾಜದಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ಮೇಲ್ವಿಚಾರಕಿ ಅಕ್ಷತಾ ರೈ, ಸ್ಥಳೀಯ ಮುಖಂಡ ವಿ. ವಿಶ್ವನಾಥ್, ರಾಜೇಶ್, ಮಂಜುಳಾ, ಹೇಮಾವತಿ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.