ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, (Vijayendra) “ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆದಿದ್ದಾರೆ. ಆದರೆ ಲೇಖಕಿ ದೀಪಾ ಭಸ್ತಿ ಅವರನ್ನು ಯಾಕೆ ಕರೆಯಲಿಲ್ಲ? ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು” ಎಂದರು.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟೀಕೆ, ಚಾಮುಂಡಿ ಬೆಟ್ಟ “ಹಿಂದೂಗಳದ್ದಲ್ಲ” ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಯ ಬಗ್ಗೆ ವಿಜಯೇಂದ್ರ ಕಿಡಿಕಾರಿದರು. ಅವರು, “ಈ ಹೇಳಿಕೆ ಅಕ್ಷಮ್ಯ ಅಪರಾಧ. ಗಾಂಧಿ ಕುಟುಂಬವನ್ನು ಖುಷಿಪಡಿಸಲು ಡಿಕೆಶಿ ಹೀಗೆ ಮಾತನಾಡಿದ್ದಾರೆ. ಈ ಮಾತು ಭಗವಂತನಿಗೂ ಒಪ್ಪುವಂಥದ್ದಲ್ಲ” ಎಂದು ಟೀಕಿಸಿದರು.
ವಿಜಯೇಂದ್ರ ಮುಂದುವರಿದು, “ಧರ್ಮಸ್ಥಳದ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡದ ಸರ್ಕಾರದ ಎಸ್ಐಟಿ ಮೇಲೆ ನಂಬಿಕೆ ಇಲ್ಲ. ಈ ಪ್ರಕರಣವನ್ನು ಎನ್ಐಎ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು” ಎಂದು ಒತ್ತಾಯಿಸಿದರು.
ಡಿಕೆಶಿಯ ಸ್ಪಷ್ಟನೆ, ಚಾಮುಂಡಿ ಬೆಟ್ಟ ಕುರಿತು ವಿವಾದದ ನಂತರ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, “ಚಾಮುಂಡಿ ಸರ್ಕಾರದ ಆಸ್ತಿ, ಅದು ಕೇವಲ ಹಿಂದೂಗಳದ್ದಲ್ಲ. ಎಲ್ಲ ಧರ್ಮದವರಿಗೂ ಆಶೀರ್ವಾದ ನೀಡುವ ದೇವತೆ. ನಾಡಹಬ್ಬಕ್ಕೆ ಎಲ್ಲಾ ಧರ್ಮದವರೂ ಹಾಗೂ ವಿದೇಶಿಗರೂ ಬರುತ್ತಾರೆ” ಎಂದು ಹೇಳಿದರು.
“ನೀರು, ಸೂರ್ಯ, ದೇವರಿಗೆ ಧರ್ಮವಿಲ್ಲ. ಚರ್ಚ್, ಮಸೀದಿ, ಜೈನ ದೇವಸ್ಥಾನಗಳಿಗೆ ಎಲ್ಲರೂ ಹೋಗುವುದೇ. ಹೀಗಾಗಿ ಚಾಮುಂಡಿಗೂ ಎಲ್ಲರೂ ಬರಬಹುದು” ಎಂದರು.