New Delhi: ಮತ ಕಳುವಿನ ವಿರುದ್ಧ 9Vote theft allegations) ಗಂಭೀರ ಆರೋಪ ಮಾಡಿ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 9Rahul Gandhi) ನೇತೃತ್ವದಲ್ಲಿ ಇಂದು ಇಂಡಿಯಾ ಒಕ್ಕೂಟದ ಸುಮಾರು 300 ಸಂಸದರು ಚುನಾವಣಾ ಆಯೋಗದ ಮುಖ್ಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಸಂಸತ್ ಭವನದಿಂದ ಈ ಮೆರವಣಿಗೆ ಆರಂಭವಾಗಿ, ಸುಮಾರು ಒಂದು ಕಿ.ಮೀ ದೂರದಲ್ಲಿರುವ ಭಾರತೀಯ ಚುನಾವಣಾ ಆಯೋಗದ ಕಚೇರಿವರೆಗೆ ಸಾಗಲಿದೆ.
ರಾಹುಲ್ ಗಾಂಧಿ ಜೊತೆಗೆ ವಿವಿಧ ವಿರೋಧ ಪಕ್ಷಗಳ ಹಿರಿಯ ನಾಯಕರು, ಸಂಸದರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವಿರೋಧಿಸಿ ಹಾಗೂ ಪಟ್ಟಿಯಲ್ಲಿ ದೋಷಗಳಿರುವ ಬಗ್ಗೆ ಆರೋಪ ಮಾಡಿ ಈ ಹೋರಾಟ ನಡೆಯುತ್ತಿದೆ.
ಇಂಡಿಯಾ ಒಕ್ಕೂಟದ ಆರೋಪ ಪ್ರಕಾರ, ಆಡಳಿತಾರೂಢ ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯನ್ನು ತನ್ನ ಪರವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯ ಉದ್ದೇಶ — ಮತದಾರರ ಪಟ್ಟಿಯ ಶುದ್ಧತೆ ಹಾಗೂ ಪಾರದರ್ಶಕತೆ ಕಾಪಾಡಲು ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವುದು. ಈ ಪ್ರತಿಭಟನೆ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟ ಸಂಸದರಿಗೆ ಭೋಜನ ಕೂಟ ಆಯೋಜಿಸಿದ್ದಾರೆ.
ಈ ನಡುವೆ ಕಾಂಗ್ರೆಸ್, ಮತ ಕಳುವಿನ ವಿರುದ್ಧ ಸಾರ್ವಜನಿಕರ ಬೆಂಬಲ ಪಡೆಯಲು votechori.in/ecdemand ವೆಬ್‌ಸೈಟ್ ಹಾಗೂ 9650003420 ಗೆ ಮಿಸ್‌ಡ್ ಕಾಲ್ ಮೂಲಕ ನೋಂದಣಿಯ ಅಭಿಯಾನ ಆರಂಭಿಸಿದೆ.
“ಒಬ್ಬ ವ್ಯಕ್ತಿಗೆ ಒಂದೇ ಮತ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಶುದ್ಧ ಮತದಾರರ ಪಟ್ಟಿ ಅಗತ್ಯ. ಆದರೆ ಈ ಮೂಲಭೂತ ಹಕ್ಕಿನ ಮೇಲೆ ದಾಳಿ ನಡೆದಿದೆ. ಈ ಹೋರಾಟ ನಮ್ಮ ಪ್ರಜಾಪ್ರಭುತ್ವ ರಕ್ಷಣೆಗೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.