New Delhi: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟವು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಶಿಫಾರಸ್ಸುಗಳೊಂದಿಗೆ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ. ಮಾರ್ಚ್ 10ರಿಂದ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು.
ಭಾರತೀಯ ಜನತಾ ಪಕ್ಷದ (BJP) ಸಂಸದ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ಜೆಪಿಸಿ ಮಸೂದೆಯನ್ನು ಪರಿಶೀಲಿಸಿದ್ದು, ಜನವರಿ 27ರಂದು 14 ತಿದ್ದುಪಡಿಗಳನ್ನು ಅಂಗೀಕರಿಸಿತು. ಸಮಿತಿಯ 655 ಪುಟಗಳ ವರದಿಯನ್ನು ಫೆಬ್ರವರಿ 13ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು.
ಈ ಮಸೂದೆ ಭಾರತೀಯ ಬಂದರು ಮಸೂದೆ ಜೊತೆಗೆ ಅಂಗೀಕರಿಸಲಾಗಿದ್ದು, ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ವರದಿ ಮಾಡಿದೆ. ವಕ್ಫ್ ತಿದ್ದುಪಡಿ ಮಸೂದೆ 2024, ವಕ್ಫ್ ಕಾಯ್ದೆ 1995 ರಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತದೆ. ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 10ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.
ಮುಖ್ಯ ತಿದ್ದುಪಡಿಗಳು
- ಪ್ರಸ್ತುತ ವಕ್ಫ್ ಕಾಯ್ದೆಯಲ್ಲಿರುವ ಕೆಲವು ಷರತ್ತುಗಳ ರದ್ದತಿ
- ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರಿಗೆ ಪ್ರಾತಿನಿಧ್ಯ
- ಆಸ್ತಿ ವಕ್ಫ್ ಆಗಿದೆಯೇ ಅಥವಾ ಸರ್ಕಾರಕ್ಕೆ ಸೇರಿದ್ದೇ ಎಂಬ ವಿವಾದ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ
- ವಕ್ಫ್ ಸಂಸ್ಥೆಗಳಲ್ಲಿ ಮುಸ್ಲಿಮೇತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ (CEO) ನೇಮಕ
ವಿರೋಧ ಪಕ್ಷಗಳು ಈ ತಿದ್ದುಪಡಿಗಳು ವಕ್ಫ್ ಮಂಡಳಿಗಳ ಅಧಿಕಾರವನ್ನು ಕುಗ್ಗಿಸಲು ಉದ್ದೇಶಿತವು ಎಂದು ಆಕ್ಷೇಪಿಸಿವೆ. ಇದರಿಂದಾಗಿ, ಆಗಸ್ಟ್ 2023ರಲ್ಲಿ ಮಸೂದೆ ಜೆಪಿಸಿಗೆ ಕಳುಹಿಸಲಾಗಿತ್ತು. ಸಂಪುಟವು ಅನುಮೋದಿಸಿದ ಮಸೂದೆ ಈಗ ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಚರ್ಚೆಗಾಗಲಿದೆ.
ಜನವರಿ 29ರಂದು ಸಂಸದೀಯ ಸಮಿತಿ ತಿದ್ದುಪಡಿ ವರದಿಯನ್ನು 15 ಪರ, 14 ವಿರುದ್ಧ ಮತಗಳೊಂದಿಗೆ ಅನುಮೋದಿಸಿತು.