Bengaluru: ಕಳೆದ ವರ್ಷ ಬೇಸಿಗೆಯಲ್ಲಿ ನೀರಿಗಾಗಿ ಪರದಾಡಿದ್ದ ಬೆಂಗಳೂರು ಮತ್ತೆ ಅದೇ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಾರಿ ಬೇಸಿಗೆ ಆರಂಭವಾಗುವ ಮುನ್ನವೇ ಅಂದರಹಳ್ಳಿ ಮತ್ತು ಸುತ್ತಮುತ್ತಲಿನ ನಿವಾಸಿಗಳು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.
ಬೋರ್ ವೆಲ್‌ಗಳು ಒಣಗಿಹೋಗಿರುವ ಕಾರಣ ಜನರು ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ದಿನಸಿ ಬಳಕೆಗೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಜಲಮಂಡಳಿ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಹಾಳಾದ ಬೋರ್ ವೆಲ್‌ಗಳ ದುರಸ್ತಿ ಕೂಡ ಮಾಡದೆ, ಸಮಸ್ಯೆ ಇನ್ನಷ್ಟು ಗಂಭೀರವಾಗುವಂತೆ ಮಾಡಿದೆ.
ಕಾವೇರಿ ನೀರಿನ ಪೈಪ್ ಲೈನ್ ಸಂಪರ್ಕವೂ ಇಲ್ಲದಿರುವುದು ಜನರ ಸಂಕಷ್ಟ ಹೆಚ್ಚಿಸಿದೆ. ಸ್ಥಳೀಯ ನಿವಾಸಿಗಳು ಹಣಕೊಟ್ಟು ಟ್ಯಾಂಕರ್ ನೀರು ಖರೀದಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇನ್ನು, ಬಾಡಿಗೆ ಮನೆಗಳಲ್ಲಿ ನೀರಿನ ಕೊರತೆಯಿಂದ ಮನೆ ಮಾಲೀಕರು ಹೆಚ್ಚುವರಿ ಹಣ ಕೇಳುತ್ತಿರುವುದರಿಂದ ಬಾಡಿಗೆದಾರರು ಮನೆಯನ್ನು ಖಾಲಿ ಮಾಡುತ್ತಿದ್ದಾರೆ.
ಪ್ರತಿ ಬೇಸಿಗೆಗೂ ಈ ಸಮಸ್ಯೆ ಪುನರಾವೃತವಾಗುತ್ತಿದ್ದು, ಜಲಮಂಡಳಿ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೊರಗುಂಟೆಪಾಳ್ಯದ ಜ್ಯೋತಿಬಾಫುಲೆ ಸ್ಲಂನಲ್ಲಿ ನೀರಿಗಾಗಿ ಪರದಾಡುತ್ತಿದ್ದ ಜನರಿಗೆ ಜಲಮಂಡಳಿ ಅಧಿಕಾರಿಗಳು ಸಿಂಟೆಕ್ಸ್ ಟ್ಯಾಂಕ್ ಇರಿಸಿ ಉಚಿತ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಾರಿಯ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಮುಂದಿನ ಮೂರು ತಿಂಗಳ ಬಿರುಬೇಸಿಗೆಗೆ ಜಲಮಂಡಳಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.