Mysuru: “ಕಾಂಗ್ರೆಸ್ ನ 140 ಶಾಸಕರ ಎದುರು, ಜೆಡಿಎಸ್ 19 ಶಾಸಕರು ಏನೂ ಮಾಡಲಾರರು. ಸರ್ಕಾರ ಸಂಖ್ಯೆಬಲದ ಮೇಲೇ ರಚನೆಯಾಗುತ್ತದೆ” ಎಂದು ಶಾಸಕ ತನ್ವೀರ್ ಸೇಠ್ (MLA Tanveer Seth) ಹೇಳಿದರು. ಕುಮಾರಸ್ವಾಮಿ ಮತ್ತು ಸತೀಶ್ ಜಾರಕಿಹೊಳಿ ಭೇಟಿಯ ಹಿಂದೆ ರಾಜಕೀಯ ಹೊಂದಾಣಿಕೆ ಇದೆ ಎಂಬುದು ಕೇವಲ ಊಹಾಪೋಹ ಎಂದು ಅವರು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಭೇಟಿಯ ಹಿಂದಿನ ಉದ್ದೇಶವನ್ನು ಸತೀಶ್ ಜಾರಕಿಹೊಳಿ ತಮ್ಮದೇ ತೋಡಿಕೊಳ್ಳಬೇಕು. “ರಾಜಕಾರಣದಲ್ಲಿ ಯಾರು ಯಾರನ್ನು ಭೇಟಿಯಾಗುತ್ತಾರೆ ಎಂಬುದಕ್ಕಿಂತ, ಆ ಭೇಟಿಯಿಂದ ಏನಾಗುತ್ತದೆ ಎಂಬುದು ಮುಖ್ಯ” ಎಂದರು.
“ನನ್ನ ಸಂಬಂಧ ಎಲ್ಲರೊಂದಿಗೂ ಚೆನ್ನಾಗಿದೆ. ನೀವು ಊಹಿಸಿದಂತೆ ನಡೆಯಬೇಕು ಅನ್ನುವುದಿಲ್ಲ. ರಾಜ್ಯ ಸಚಿವರು, ಕೇಂದ್ರ ಸಚಿವರನ್ನು ಭೇಟಿಯಾಗುವುದು ಸಾಮಾನ್ಯ. ಈ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಲು ಸಚಿವ ಸತೀಶ್ ಜಾರಕಿಹೊಳಿ ಬಯಸಿದರೆ, ಅವರು ತೀರ್ಮಾನ ಮಾಡಲಿ” ಎಂದು ಅವರು ಹೇಳಿದರು.
“ಯಾರಿಗೂ ಕುರ್ಚಿ ಶಾಶ್ವತವಲ್ಲ. 140 ಶಾಸಕರ ಎದುರು 19 ಜೆಡಿಎಸ್ ಶಾಸಕರು ಏನೂ ಮಾಡಲಾಗದು. ಸರ್ಕಾರಗಳು ಸಂಖ್ಯಾಬಲದ ಆಧಾರದ ಮೇಲೆ ರಚನೆಯಾಗುತ್ತವೆ. ಹಾಗಾಗಿ ಈ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ” ಎಂದು ತನ್ವೀರ್ ಸೇಠ್ ವಿವರಿಸಿದರು.
ಹನಿಟ್ರ್ಯಾಪ್ ಯತ್ನ ಕುರಿತು ಕೇಳಿದ ಪ್ರಶ್ನೆಗೆ, “ಯಾರೋ ಕರೆ ಮಾಡುತ್ತಾರೆ, ಯಾರೋ ಸ್ವೀಕರಿಸುತ್ತಾರೆ. ಅದನ್ನು ಮುಂದುವರಿಸುವುದು ಅವರ ನಿರ್ಧಾರ. ಈ ವಿಷಯ ಸಾರ್ವಜನಿಕರಿಗೆ ಸಂಬಂಧಿಸಿದ್ದಿಲ್ಲ. ಸದನದಲ್ಲಿ ಚರ್ಚೆಯಾದ್ದರಿಂದ ಈ ವಿಷಯ ಮುನ್ನೆಲೆಗೆ ಬಂದಿದೆ. ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
“ನಾನು ರಾಜಕೀಯದಲ್ಲಿ ಸೇವೆಯನ್ನು ಮುಖ್ಯಗೊಳಿಸಿದ್ದೇನೆ. ಇದರಿಂದಲೇ ರಾಜಕೀಯ ನಿವೃತ್ತಿ ಘೋಷಿಸಿದ್ದೆ. ಆದರೂ ವರಿಷ್ಠರ ಒತ್ತಡದಿಂದ ಸ್ಪರ್ಧಿಸಿದೆ, ಜನರು ಆಯ್ಕೆ ಮಾಡಿದರು. ಅವರ ಸೇವೆ ಮಾಡುವುದು ನನ್ನ ಗುರಿ” ಎಂದು ಅವರು ತಿಳಿಸಿದರು. ರಾಜಕೀಯ ವೈಯುಕ್ತಿಕ ವಿಚಾರಗಳ ಕಾರಣದಿಂದ ಬೇಸರ ವ್ಯಕ್ತಪಡಿಸಿದರು.