Shivamogga: ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ ಜಾತಿ ಗಣತಿ (caste census) ಏಕೆ ಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Sri Vishwaprasanna Theertha Swamiji of Pejavara Math) ಪ್ರಶ್ನಿಸಿದರು.
ಹೊಸಪೇಟೆಗೆ ತೆರಳುವ ಮಾರ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (Eshwarappa) ಮನೆಗೆ ಸೋಮವಾರ ಭೇಟಿ ನೀಡಿದ ಅವರು ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಾತಿಗಣತಿಗಾಗಿ ಸರಕಾರವು ದೊಡ್ಡ ಮೊತ್ತ ವೆಚ್ಚ ಮಾಡಿ ವರದಿಯನ್ನು ಮುಚ್ಚಿಟ್ಟಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಏಕೆ ಬೇಕು. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎಂದು ಮತ್ತೊಂದು ಕಡೆ ಜಾತಿಗಣತಿ ಬೇಕು ಎನ್ನುತ್ತಾರೆ. ಜಾತಿ ಗಣತಿ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಉಡುಪಿ ಶ್ರೀಕೃಷ್ಣ ಮಠಕ್ಕೂ ತಮಗೂ ಕೃಷ್ಣ ಮತ್ತು ಕನಕದಾಸರ ಸಂಬಂಧದಂತೆ ಎಂದರು. ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
“ಸಂಕ್ರಾಂತಿ ಸಂದರ್ಭ ಕೂಡಲ ಸಂಗಮದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಬ್ರಿಗೇಡ್ ಹೆಸರು ಘೋಷಣೆ ಮಾಡಲಾಗುತ್ತದೆ. ಈ ಸಂಬಂಧ ನೂರಾರು ಸ್ವಾಮೀಜಿಗಳ ಜತೆಗೆ ಚರ್ಚೆ ಮಾಡಿದ್ದೇವೆ. ಸಾಧುಸಂತರ ಮುಂದಾಳತ್ವದಲ್ಲಿ ಬ್ರಿಗೇಡ್ ಮುನ್ನಡೆಸಲಾಗುವುದು” ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದರು.