
ಇಂದು (ಸೆಪ್ಟೆಂಬರ್ 2) ವಿಶ್ವ ತೆಂಗಿನಕಾಯಿ ದಿನ. ಈ ವರ್ಷದ ಆಚರಣೆಯ ವಿಷಯ ತೆಂಗಿನಕಾಯಿ ವಲಯದಲ್ಲಿ ನಾವೀನ್ಯತೆ, ಬಲಪಡಿಸುವುದು ಮತ್ತು ಪುನರುಜ್ಜೀವನಗೊಳಿಸುವುದು. ಭಾರತದಲ್ಲಿ, ವಿಶೇಷವಾಗಿ ಕೇರಳ ರಾಜ್ಯದಲ್ಲಿ ತೆಂಗಿನಕಾಯಿ ಬೆಳೆ ಪ್ರಮುಖ ಸ್ಥಾನ ಪಡೆದಿದೆ. ರಾಜ್ಯದ ಒಟ್ಟು ಕೃಷಿಯ ಶೇ.36ರಷ್ಟು ಭಾಗದಲ್ಲಿ ತೆಂಗಿನಕಾಯಿ ಬೆಳೆದಿದೆ.
2024ರ ಅಂಕಿ–ಅಂಶಗಳ ಪ್ರಕಾರ, ಕೇರಳದಲ್ಲಿ 7.66 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ತೆಂಗಿನಕಾಯಿ ಬೆಳೆಯಲಾಗುತ್ತಿದೆ. ವರ್ಷಕ್ಕೆ 552.2 ಕೋಟಿ ತೆಂಗಿನಕಾಯಿಗಳು ಉತ್ಪಾದನೆಯಾಗುತ್ತಿವೆ. ಒಂದು ಹೆಕ್ಟೇರ್‌ಗೆ ಸರಾಸರಿ 720 ತೆಂಗಿನಕಾಯಿಗಳ ಇಳುವರಿ ಸಿಗುತ್ತಿದೆ. ಆದರೆ ಕಳೆದ 25 ವರ್ಷಗಳಲ್ಲಿ ಬೆಳೆ ಪ್ರದೇಶವು ಶೇ.17ರಷ್ಟು ಕುಸಿದಿದೆ.
ಕುಟ್ಯಾಡಿ ತಳಿ ತೆಂಗಿನ ವಿಶೇಷತೆ: ಕೇರಳದ ಎಲ್ಲೆಡೆ ತೆಂಗಿನಕಾಯಿ ಬೆಳೆದರೂ, ಕುಟ್ಯಾಡಿ ತಳಿ ತೆಂಗಿನ ಮರಗಳು ವಿಶಿಷ್ಟ. ನೆಟ್ಟ ಐದು ವರ್ಷಗಳಲ್ಲಿ ಫಲ ನೀಡುತ್ತವೆ. ಈ ತಳಿ ಬಲವಾದದ್ದು, ಹೆಚ್ಚು ಇಳುವರಿ ನೀಡುವುದು, ದೊಡ್ಡ ಗಾತ್ರದ ತೆಂಗಿನಕಾಯಿ, ದಪ್ಪ ಕೊಬ್ಬರಿ ಮತ್ತು ಹೆಚ್ಚಿನ ಎಣ್ಣೆ ಹೊಂದಿರುವುದು ಇದರ ವೈಶಿಷ್ಟ್ಯ. ಈ ಮರಗಳು ಕೀಟರೋಗ ತಡೆದುಕೊಳ್ಳುತ್ತವೆ ಮತ್ತು 100 ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತವೆ.
ಕುಟ್ಯಾಡಿ ತಳಿಗೆ ಭೌಗೋಳಿಕ ಸೂಚನೆ (GI) ಮಾನ್ಯತೆ ಸಿಗುವ ನಿರೀಕ್ಷೆ ಇದೆ. ಕೇರಳ ಕೃಷಿ ವಿಶ್ವವಿದ್ಯಾಲಯ ಮತ್ತು ಕವಿಲುಂಪರ ಪಂಚಾಯತ್ ಈಗಾಗಲೇ ಪ್ರಕ್ರಿಯೆ ಆರಂಭಿಸಿವೆ. GI ಟ್ಯಾಗ್ ಸಿಕ್ಕರೆ, ಕುಟ್ಯಾಡಿ ತೆಂಗಿನಕಾಯಿಗಳಿಗೆ ದೇಶ-ವಿದೇಶದ ಮಾರುಕಟ್ಟೆ ಲಭ್ಯವಾಗಲಿದೆ.
ಸ್ಥಳೀಯ ರೈತರ ಪ್ರಕಾರ, ಇತರ ತಳಿಗಳು ಹವಾಮಾನವನ್ನು ತಡೆದುಕೊಳ್ಳಲು ಅಥವಾ ಹೆಚ್ಚು ಇಳುವರಿ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಕುಟ್ಯಾಡಿ ತಳಿಯೇ ಜನಪ್ರಿಯವಾಗಿದೆ. ಪ್ರತಿ ವರ್ಷ ರಾಜ್ಯಾದ್ಯಂತ ಕುಟ್ಯಾಡಿಯಿಂದ ಸಸಿಗಳನ್ನು ಸಂಗ್ರಹಿಸಿ ವಿತರಿಸಲಾಗುತ್ತಿದೆ.
ಈ ಪ್ರದೇಶದ ಸಾವಿರಾರು ಜನರು ತೆಂಗಿನ ಮಾರಾಟ ಮಾತ್ರವಲ್ಲದೆ, ಕುಟ್ಯಾಡಿ ಸಸಿಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಆದರೆ ರೋಗ ನಿಯಂತ್ರಣ ಹಾಗೂ ಬೆಳೆ ನಷ್ಟ ತಡೆಯಲು ಸರ್ಕಾರದಿಂದ ಬೇಕಾದ ಬೆಂಬಲ ಸಿಗುತ್ತಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಕೋಸ್ಟ್ ಟಾಲ್ (WCT) ತಳಿಯ ಜೊತೆ ಹೋಲಿಸಿದಾಗ, ಕುಟ್ಯಾಡಿ ತಳಿ ಎತ್ತರ, ಕಾಯಿ ಗಾತ್ರ, ತೂಕ ಮತ್ತು ಎಣ್ಣೆಯ ಅಂಶದಲ್ಲಿ ಉತ್ತಮವಾಗಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಆದರೂ GI ಟ್ಯಾಗ್ ಇನ್ನೂ ಸಿಕ್ಕಿಲ್ಲ. ಇದು ಸಿಕ್ಕರೆ ಕುಟ್ಯಾಡಿ ತಳಿಯ ಮೌಲ್ಯ ಇನ್ನಷ್ಟು ಹೆಚ್ಚಲಿದೆ ಎಂಬುದು ರೈತರ ಆಶೆ.