ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagouda Patil Yatnal) ನಡುವಿನ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ, ಶಿಸ್ತು ಉಲ್ಲಂಘನೆಯ ಬಗ್ಗೆ ಯತ್ನಾಳ್ ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. 72 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು.
ಯತ್ನಾಳ್ ನೋಟಿಸ್ ಪಡೆದ ಮರುದಿನವೇ ಶಿಸ್ತು ಸಮಿತಿಗೆ 9 ಪುಟಗಳ ವಿವರವಾದ ಉತ್ತರವನ್ನು ಇ-ಮೇಲ್ ಮೂಲಕ ಕಳುಹಿಸಿದ್ದಾರೆ. ಆದರೆ, ಅವರ ಉತ್ತರದ ಸಂಪೂರ್ಣ ವಿವರ ಇನ್ನೂ ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ, ಉತ್ತರದಲ್ಲಿ ವಿಜಯೇಂದ್ರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ.
“ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ. ಪಕ್ಷದ ಶಿಸ್ತನ್ನು ಉಲ್ಲಂಘಿಸಿಲ್ಲ. ವಕ್ಫ್ ವಿರುದ್ಧ ಹೋರಾಟ ನಮ್ಮ ಸಮೂಹ ಪ್ರಚಾರದ ಭಾಗ. ಆದರೆ, ವಿಜಯೇಂದ್ರ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಯತ್ನಾಳ್ ಉತ್ತರಿಸಿದ್ದಾರೆ.
ನೋಟಿಸ್ ನಂತರ, ಯತ್ನಾಳ್ ಬಣದ ನಾಯಕರು ಮಾಧ್ಯಮದಿಂದ ದೂರ ಉಳಿದುಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡದೆ, ಗೋಕಾಕ್‌ನಲ್ಲಿ ತಮ್ಮ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡಿದ್ದಾರೆ.
ಹಿಂದೆಯೂ ಯತ್ನಾಳ್ ವಿರುದ್ಧ ಶಿಸ್ತು ಸಮಿತಿ ಕ್ರಮ ಕೈಗೊಂಡಿತ್ತು. ಮಾಜಿ ಸಿಎಂ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಅವರ ಟೀಕೆಗಳ ನಂತರ, ಕಳೆದ ಡಿಸೆಂಬರ್‌ನಲ್ಲಿ ನೋಟಿಸ್ ನೀಡಲಾಗಿತ್ತು. ಅದಕ್ಕೂ ಉತ್ತರ ನೀಡಿದ ಯತ್ನಾಳ್, ವಿಜಯೇಂದ್ರ ವಿರುದ್ಧ ಅವರ ವಾಗ್ದಾಳಿಯನ್ನು ಮುಂದುವರಿಸಿದ್ದರು.
ಈ ಬಾರಿ ಹೈಕಮಾಂಡ್ ಯತ್ನಾಳ್ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.