Hyderabad: IPL 12ನೇ ಪಂದ್ಯ ಸೋಮವಾರ ನಡೆಯಿತು, ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 8 ವಿಕೆಟ್ ಗಳಿಂದ ಗೆಲುವು ಸಾಧಿಸಿ ಈ ಆವೃತ್ತಿಯ ಮೊದಲ ಜಯ ದಾಖಲಿಸಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ KKR ತಂಡ ಮುಂಬೈ ಬೌಲರ್‌ಗಳ ದಾಳಿಗೆ ತುತ್ತಾಗಿ ಕೇವಲ 116 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ಸುಲಭವಾಗಿ ಬೆನ್ನಟ್ಟಿ, 12.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಮುಂಬೈ ಪರ ರಯಾನ್ ರಿಕಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಗೆಲುವಿನಲ್ಲಿ 30 ಲಕ್ಷಕ್ಕೆ ಖರೀದಿಯಾಗಿದ್ದ ಯುವ ವೇಗಿ ಅಶ್ವನಿ ಕುಮಾರ್ ಪ್ರಮುಖ ಪಾತ್ರ ವಹಿಸಿದರು. 3 ಓವರ್ ಬೌಲಿಂಗ್ ಮಾಡಿದ ಅವರು 24 ರನ್ ನೀಡಿ ಅಜಿಂಕ್ಯಾ ರಹಾನೆ, ರಿಂಕು ಸಿಂಗ್, ಮನೀಶ್ ಪಾಂಡೆ ಮತ್ತು ಆಂಡ್ರೇ ರಸೆಲ್ ಅವರನ್ನು ಪೆವಿಲಿಯನ್‌ಗೆ ಮರಳಿಸಿದರು.
ಅಶ್ವನಿ ಕುಮಾರ್ ತಮ್ಮ ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ಐಪಿಎಲ್ ಡೆಬ್ಯೂ ಪಂದ್ಯದಲ್ಲಿ 4 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ, ಐಪಿಎಲ್ ಆರಂಭಿಕ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಖ್ಯಾತಿಗೂ ಅರ್ಹರಾದರು. ಈ ಪಟ್ಟಿಯಲ್ಲಿ ಅಲ್ಜಾರಿ ಜೋಸೆಫ್ ಮೊದಲ ಸ್ಥಾನದಲ್ಲಿದ್ದು, 6 ವಿಕೆಟ್ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ಅಶ್ವನಿ ಕುಮಾರ್ ಅವರನ್ನು ₹30 ಲಕ್ಷಕ್ಕೆ ಖರೀದಿಸಿತ್ತು. ಚೊಚ್ಚಲ ಪಂದ್ಯದಲ್ಲಿಯೇ ಅವರು ತಮ್ಮ ಮಿಂಚಿನ ಬೌಲಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.