
Antananarivo: ನೇಪಾಳದ ಬಳಿಕ ಪುಟ್ಟ ದ್ವೀಪ ದೇಶ ಮಡಗಾಸ್ಕರ್‌ನಲ್ಲಿ ಜನರು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವಿವಿಧ ಪ್ರದೇಶಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ 22 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರದಿಂದ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯುತ್ ಮತ್ತು ನೀರಿನ ಸರಬರಾಜಿನಲ್ಲಿ ಸಮಸ್ಯೆ ಉಂಟಾದುದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಶಾಂತಿಯುತವಾಗಿ ನಡೆದ ಪ್ರತಿಭಟನೆಗಳು ನಂತರ ಹಿಂಸಾಚಾರ ರೂಪ ಪಡೆದಿವೆ. ಯುವಜನತೆ ಸರ್ಕಾರದ ವೈಫಲ್ಯಕ್ಕೆ ಆಕ್ರೋಶ ತೋರಿಸುತ್ತ, ಹೊಸ ಚುನಾವಣೆ ನಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.
ಭಾನುವಾರ ಅಧ್ಯಕ್ಷ ರಾಜೋಲಿನಾ ಇಂಧನ ಸಚಿವರನ್ನು ವಜಾಗೊಳಿಸಿದರು. ಅಂಟಾನನರಿವೋಗೆ ಭೇಟಿ ನೀಡಿ, ಜನಜೀವನ ಸುಧಾರಿಸಲು ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ಕ್ರಿಶ್ಚಿಯನ್ ಎನ್ಟ್ಸೇ ಅವರನ್ನು ಹುದ್ದೆಯಿಂದ ವಜಾ ಮಾಡಿದರೂ, ಮಧ್ಯಂತರ ಸರ್ಕಾರ ಕಾರ್ಯನಿರ್ವಹಿಸಲು ಮುಂದಾಗಿದೆ. ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯುತ್ ಮತ್ತು ನೀರಿನ ಕೊರತೆಯಿಂದ ಕೋಪಗೊಂಡ ಯುವಜನತೆ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಶುಕ್ರವಾರ ಶಾಂತಿಯುತವಾಗಿ ಆರಂಭವಾದ ಪ್ರತಿಭಟನೆ ಮಧ್ಯಪ್ರವೇಶಿಸಿದ ಭದ್ರತಾ ಪಡೆಗಳಿಂದ ಹಿಂಸಾಚಾರಕ್ಕೆ ತಿರುಗಿದೆ. ಅಶ್ರುವಾಯು, ಹಲ್ಲೆ, ಬಂಧನ ಮತ್ತು ಕೆಲ ಶಸ್ತ್ರಾಸ್ತ್ರ ಬಳಕೆ ಪ್ರಕರಣಗಳು ಸಂಭವಿಸಿದೆ. ಕೆಲವು ಹತ್ಯೆಗಳು ಲೂಟು ಮತ್ತು ಭದ್ರತೆ ಸಂಬಂಧಿತ ಗೊಂದಲಗಳಿಂದಾಗಿವೆ.
ಪರಿಸ್ಥಿತಿ ನಿಯಂತ್ರಣಕ್ಕಾಗಿ ಅಂಟಾನನರಿವೋ ಮತ್ತು ಪ್ರಮುಖ ನಗರಗಳಲ್ಲಿ ರಾತ್ರಿ ಹೊತ್ತಿಗೆ ಕರ್ಪ್ಯೂ ವಿಧಿಸಲಾಗಿದೆ.
ಆಫ್ರಿಕಾದ ಪೂರ್ವ ಕರಾವಳಿಯಲ್ಲಿ ಇರುವ ವಿಶಾಲ ದ್ವೀಪ ಮಡಗಾಸ್ಕರ್, ಸುಮಾರು 31 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ವಿಫಲವಾದ ಸರ್ಕಾರಕ್ಕೆ ಯುವಜನತೆ ಪ್ರತಿಭಟನೆ ಮೂಲಕ ಆಕ್ರೋಶ ತೋರಿಸುತ್ತಿದೆ.