ನೋಯ್ಡಾದ ಶಿವ್ ನಾಡರ್ ಶಾಲೆಯ 14 ವರ್ಷದ ವಿದ್ಯಾರ್ಥಿ ದಕ್ಷ್ ಮಲಿಕ್, (Daksh Malik) ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಅವರು ಮಂಗಳ ಮತ್ತು ಗುರು ಗ್ರಹಗಳ ನಡುವೆ ಇರುವ ಒಂದು ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಯತ್ನವನ್ನು ನಾಸಾದ ವಿದ್ಯಾರ್ಥಿ ಯೋಜನೆ ಅಡಿಯಲ್ಲಿ ಮಾಡಿದ್ದಾರೆ.
ಅಂತರಾಷ್ಟ್ರೀಯ ಕ್ಷುದ್ರಗ್ರಹ ಪತ್ತೆ ಯೋಜನೆ (IADP) ಅಡಿಯಲ್ಲಿ, ನಾಸಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಸಂಶೋಧನೆ ಮಾಡಲು ಅವಕಾಶವನ್ನು ನೀಡುತ್ತದೆ. 2022ರಲ್ಲಿ ಈ ಯೋಜನೆಗೆ ಸೇರಿಕೊಂಡ ದಕ್ಷ್ ಮಲಿಕ್, ತನ್ನ ತಂಡದೊಂದಿಗೆ ಕಾರ್ಯನಿರ್ವಹಿಸಿ ಈ ಕ್ಷುದ್ರಗ್ರಹವನ್ನು ಪತ್ತೆಹಚ್ಚಿದ್ದಾರೆ.
ಈ ಕ್ಷುದ್ರಗ್ರಹವನ್ನು ತಾತ್ಕಾಲಿಕವಾಗಿ “2023 OG40” ಎಂದು ಹೆಸರಿಸಲಾಗಿದೆ. ನಾಸಾ ಇದರ ವಸ್ತುನಿಷ್ಠ ಪರಿಶೀಲನೆ ನಡೆಸುತ್ತಿದ್ದು, ಈ ಪ್ರಕ್ರಿಯೆಗೆ 4-5 ವರ್ಷಗಳು ಬೇಕಾಗುತ್ತದೆ.
ನಾಸಾ ಈಗ ದಕ್ಷ್ ಮಲಿಕ್‌ಗೆ ಈ ಕ್ಷುದ್ರಗ್ರಹಕ್ಕೆ ಒಂದು ಹೆಸರು ನೀಡಲು ಅವಕಾಶ ನೀಡಿದೆ. ದಕ್ಷ್ ಸೂಚಿಸುವ ಹೆಸರೇ ಈ ಗ್ರಹಕ್ಕೆ ಅಧಿಕೃತವಾಗಲಿದೆ.
ದಕ್ಷ್ ಮಲಿಕ್ ಅವರ ಈ ಸಾಧನೆ ಭಾರತೀಯ ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಶ್ವದ ಮಟ್ಟಕ್ಕೆ ತೋರಿಸಿದೆ. ಇಸ್ರೋ ಜೊತೆಗೆ ಭಾರತೀಯರು ಬಾಹ್ಯಾಕಾಶದಲ್ಲಿ ಸಾಧಿಸುತ್ತಿರುವ ಈ ಮಟ್ಟದ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ.