
2014 TN17 ಹೆಸರಿನ ದೊಡ್ಡ ಕ್ಷುದ್ರಗ್ರಹವು (Asteroid) ಭೂಮಿಯತ್ತ ವೇಗವಾಗಿ ನುಗ್ಗುತ್ತಿರುವ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಕೆ ನೀಡಿದೆ. ಇದು ಸಾಮಾನ್ಯ ಕ್ಷುದ್ರಗ್ರಹವಲ್ಲ, ಈ ಬಾಹ್ಯಾಕಾಶ ಶಿಲೆ ಗಂಟೆಗೆ 77,282 ಕಿ.ಮೀ ವೇಗದಲ್ಲಿ ಸಾಗುತ್ತಿದೆ.
ಈ ಕ್ಷುದ್ರಗ್ರಹ ಭೂಮಿಯ ಸಮೀಪ ಹಾದು ಹೋಗುವ ಸಂಭವವಿದ್ದು, ಆದರೂ ಅದು ಸುರಕ್ಷಿತ ದೂರವಿರುವುದಾಗಿ ನಾಸಾ ತಿಳಿಸಿದೆ. ಆದರೆ, ಇದರ ದೊಡ್ಡ ಗಾತ್ರ ಮತ್ತು ಭೂಮಿಗೆ ಇರುವ ಸಾಮೀಪ್ಯತೆಯನ್ನು ಗಮನಿಸಿ, ಇದನ್ನು “ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ” (PHA) ಎಂದು ಪರಿಗಣಿಸಲಾಗಿದೆ.
ಸುಮಾರು 540 ಅಡಿಗಳಷ್ಟು ಅಗಲವಿರುವ ಈ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಸಾ ತನ್ನ ಅಧ್ಯಯನ ಕೇಂದ್ರದ ಮೂಲಕ ಭೂಮಿಯ ಸಮೀಪ ಹಾದುಹೋಗುವ ವಸ್ತುಗಳ ಮೇಲಿನ ನಿಗಾ ಮುಂದುವರಿಸಿದೆ.
ಪ್ರಸ್ತುತ ಈ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಅಪಾಯವಿಲ್ಲ. ಆದರೆ, ಭವಿಷ್ಯದಲ್ಲಿ ಇದರ ಕಕ್ಷೆಯಲ್ಲಿ ಸಣ್ಣ ಬದಲಾವಣೆಗಳಾದರೆ, ಭೂಕಂಪ, ಸುನಾಮಿ ಹಾಗೂ ಹವಾಮಾನ ಬದಲಾವಣೆಯಂತಹ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ವಿಜ್ಞಾನಿಗಳು ಈ ರೀತಿಯ ಬಾಹ್ಯಾಕಾಶ ಶಿಲೆಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ.